ಉತ್ತರ ಪ್ರದೇಶ:ಪ್ರಧಾನಿ ನರೇಂದ್ರ ಮೋದಿ ಇಂದು ಎರಡನೇ ಬಾರಿಗೆ ವಾರಣಾಸಿಯಿಂದಲೇ ಅದೃಷ್ಟ ಪರೀಕ್ಷೆ ನಡೆಸಲು ಸನ್ನದ್ಧರಾಗಿದ್ದಾರೆ. ನಾಮಪತ್ರ ಸಲ್ಲಿಕೆಗೂ ಮುನ್ನ ಪ್ರಧಾನಿ ಬಿಜೆಪಿ ಕಾರ್ಯಕರ್ತರನ್ನ ಉದ್ದೇಶಿಸಿ ಮಾತನಾಡಿದರು.
ತಮ್ಮ ಭಾಷಣದ ಮೂಲಕ ಪಕ್ಷದ ಕಾರ್ಯರ್ತರ ಉತ್ಸಾಹವನ್ನು ಇಮ್ಮಡಿಗೊಳಿಸುವ ಕೆಲಸ ಮಾಡಿದರು.
ಭಾಷಣದಲ್ಲಿ ಅವರು ತಮ್ಮ ಪಕ್ಷದ ಪರಿಶ್ರಮ ಹಾಗೂ ಜನರ ಪ್ರೀತಿಗೆ ಋಣಿ ಎಂದರು. ಅಷ್ಟೇ ಅಲ್ಲದೇ ಚುನಾವಣೆಯಲ್ಲಿ ಪ್ರತಿನಿಧಿಸುತ್ತಿರುವ ಪ್ರತಿಯೊಬ್ಬ ಅಭ್ಯರ್ಥಿಗೂ ಗೌರವಯುತ ವ್ಯಕ್ತಿತ್ವವಿದೆ, ಯಾರೂ ಕೂಡ ನಮಗೆ ವೈರಿಗಳಲ್ಲ. ದೇಶದಲ್ಲಿ ಪ್ರಜಾಪ್ರಭುತ್ವ ಗೆಲ್ಲಬೇಕು. ದೇಶಕ್ಕಾಗಿ ವೋಟು ಹಾಕಿ ಎಂದು ದೇಶಪ್ರೇಮ, ಸಮಾನತೆಯ ಅಸ್ತ್ರ ಬೀಸಿದರು ನರೇಂದ್ರ ಮೋದಿ.
ಇದೇ ವೇಳೆ ಮತದಾರರನ್ನು ಸೆಳೆಯುವ ಉದ್ದೇಶದಿಂದ ಮಾತನಾಡಿದ ಪ್ರಧಾನಿ, ತಾಯಂದಿರು ಸಹೋದರಿಯರು 21ನೇ ಶತಮಾನದ ಶಕ್ತಿ. ಪ್ರತಿಯೊಬ್ಬ ಮತದಾರನೂ ಬಹುಮುಖ್ಯ. ನಮ್ಮ ನಿಮ್ಮ ಗುರಿ ಮೋದಿಯಲ್ಲ, ಮತದಾನ ಎಂದರು. ಈ ಮೂಲಕ ಎಲ್ಲರೂ ತಪ್ಪದೇ ಮತದಾನ ಮಾಡಿ ಪ್ರಜಾಪ್ರಭುತ್ವದ ಆಶಯ ಉಳಿಸಿ ಎಂದು ಕರೆ ನೀಡಿದರು.