ಕರ್ನಾಟಕ

karnataka

ETV Bharat / bharat

ಭಾರತದಲ್ಲಿ ಎಲ್ಲವೂ ಬದಲಾಗುತ್ತಿದೆ ಎಂದ ಪ್ರಧಾನಿ ಮೋದಿ.... 'ಹೌಡಿ ಮೋದಿ'ಯಲ್ಲಿ ಪಾಕ್​​ ವಿರುದ್ಧ ಕಿಡಿ!

ಸಪ್ತ ಸಾಗರ ದಾಟಿ ಅಮೆರಿಕಾ ಪ್ರವಾಸ ಕೈಗೊಂಡಿರೋ ಪ್ರಧಾನಿ ನರೇಂದ್ರ ಮೋದಿ, ಹ್ಯೂಸ್ಟನ್​​​ ನೆಲದಲ್ಲಿ ಅನಿವಾಸಿ ಭಾರತೀಯರನ್ನು ಉದ್ದೇಶಿಸಿ ಮಾತನಾಡಿದರು. ಈ ವೇಳೆ ಜಾಗತಿಕ ಮಟ್ಟದಲ್ಲಿ ಭಾರತದ ಸಾಧನೆಯನ್ನು ಕೊಂಡಾಡಿದರು. ಅಲ್ಲದೆ ಪಾಕ್​ ಉಗ್ರರನ್ನು ಪೋಷಿಸುತ್ತಿದೆ ಎಂದು ಆರೋಪಿಸಿದ ಮೋದಿ, ಈ ಕಾರಣಕ್ಕಾಗಿಯೇ ಆ ದೇಶ 370ನೇ ವಿಧಿ ರದ್ಧತಿ ಬಗ್ಗೆ ತಲೆ ಕೆಡಿಸಿಕೊಂಡಿದೆ ಎಂದರು.

ಪ್ರಧಾನಿ ನರೇಂದ್ರ ಮೋದಿ

By

Published : Sep 23, 2019, 2:45 AM IST

ಹ್ಯೂಸ್ಟನ್​:ಅಮೆರಿಕ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ 'ಹೌಡಿ ಮೋದಿ' ಸಮಾರಂಭದಲ್ಲಿ ಅನಿವಾಸಿ ಭಾರತೀಯರನ್ನು ಉದ್ದೇಶಿಸಿ ಮಾತನಾಡಿದರು.

ಉಗ್ರ ನಿರ್ಮೂಲನೆಯಲ್ಲಿ ಭಾರತ ನಿರ್ಣಾಯಕ ಹೋರಾಟ ನಡೆಸುತ್ತಿದೆ. ಆದರೆ ಆ ದೇಶ(ಪಾಕಿಸ್ತಾನ) ಉಗ್ರರನ್ನು ಹಾಗೂ ಉಗ್ರವಾದವನ್ನು ಪೋಷಿಸುತ್ತಿದೆ. ಆ ರಾಷ್ಟ್ರ ಭಯೋತ್ಪಾದನೆಯನ್ನು ಪೋಷಿಸುತ್ತಿರುವುದು ಎಲ್ಲರಿಗೂ ತಿಳಿದಿದೆ. ಅಮೆರಿಕದಲ್ಲಿ ಹಾಗೂ ಭಾರತದಲ್ಲಿ ಆ ದೇಶದ ಪೋಷಿತ ಉಗ್ರ ಸಂಘಟನೆ ದಾಳಿ ನಡೆಸಿದೆ. ತಮ್ಮ ದೇಶವನ್ನೇ ಸರಿಯಾಗಿ ನೋಡಿಕೊಳ್ಳಲಾಗದ ಕೆಲವರು ಭಾರತದ ಮಾಡಿರುವ ಕೆಲಸದಿಂದ ಚಿಂತಾಕ್ರಾಂತರಾಗಿದ್ದಾರೆ. ಅವರಿಗೆ ಶಾಂತಿ ಅಗತ್ಯವಿಲ್ಲ ಎಂದು ಮೋದಿ ಪಾಕ್​ ವಿರುದ್ಧ ಕಿಡಿಕಾರಿದರು.

ನಾವು 370ನೇ ವಿಧಿಯನ್ನು ಭಾರಿ ಬಹುಮತದೊಂದಿಗೆ ರದ್ದು ಮಾಡಿದೆವು. 370 ವಿಧಿ ರದ್ಧತಿ ವೇಳೆ ಗಂಟೆಗಟ್ಟಲೆ ಸಂಸತ್ತಿನಲ್ಲಿ ಚರ್ಚೆಯಾಯಿತು. ಈ ವಿಧಿ ರದ್ಧತಿ ಮೂಲಕ ಕಾಶ್ಮೀರಿಗಳು ಭಾರತದೊಂದಿಗೆ ಸೇರಿದ್ದಾರೆ. ಭಾರತದ ಈ ಎಲ್ಲಾ ಬೆಳವಣಿಗೆ ಕಂಡು ಕೆಲವರಿಗೆ ಕಿರಿಕಿರಿಯಾಗುತ್ತಿದೆ. ಉಗ್ರರನ್ನು ಪೋಷಿಸುತ್ತಿರುವ ದೇಶವು ಭಾರತದ ದಿಟ್ಟ ನಿರ್ಧಾರದಿಂದ ತಲೆಕೆಡಿಸಿಕೊಂಡಿದೆ. 370ರ ವಿಧಿ ರದ್ದತಿಯಿಂದ ಆ ದೇಶಕ್ಕೆ ಉಗ್ರವಾದದ ಪೋಷಣೆ ಕಷ್ಟವಾಗುತ್ತಿದೆ. ಈ ಕಾರಣದಿಂದಲೇ ಆ ದೇಶ 370ರ ವಿಧಿ ರದ್ಧತಿ ಬಗ್ಗೆ ಮಾತನಾಡುತ್ತಿದೆ ಎಂದು ಮೋದಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಮ್ಮ ದೇಶದಲ್ಲಿ ವಿಶ್ವದಲ್ಲೇ ಅತ್ಯಂತ ಕಡಿಮೆ ದರಕ್ಕೆ ಇಂಟರ್​ನೆಟ್ ಲಭ್ಯವಿದೆ. ಈ ಮೂಲಕ ಡಿಜಿಟಲ್​ ಇಂಡಿಯಾಗೂ ಬೆಂಬಲ ನೀಡುತ್ತಿದ್ದೇವೆ. ದೇಶದಲ್ಲಿ ಆನ್​ಲೈನ್​​ ವ್ಯವಹಾರವೂ ಭಾರಿ ಮಹತ್ವ ಪಡೆದುಕೊಂಡಿದೆ. ಪಾಸ್​ಪೋರ್ಟ್ ಸೌಲಭ್ಯವೂ ನಮ್ಮ ದೇಶದಲ್ಲಿ ಈಗ ಶೀಘ್ರವಾಗಿ ದೊರೆಯುತ್ತದೆ. ಹಣ ವರ್ಗಾವಣೆ ಸೇರಿದಂತೆ ಬ್ಯಾಂಕಿಂಗ್​ ವ್ಯವಹಾರಗಳೂ ಶೀಘ್ರವಾಗಿ ನಡೆಯುತ್ತಿವೆ ಎಂದು ಭಾರತದ ಸಾಧನೆಯನ್ನು ಮೋದಿ ಕೊಂಡಾಡಿದರು.

ಒಂದು ದೇಶ ಒಂದು ಟ್ಯಾಕ್ಸ್​ ವ್ಯವಸ್ಥೆ ಎಂಬಂತೆ ಜಿಎಸ್​ಟಿ ಜಾರಿ ಮೂಲಕ ಟ್ಯಾಕ್ಸ್ ರಿಟರ್ನ್​ ಈಗ ಸುಲಭವಾಗಿದೆ. ಈ ಮೂಲಕ ಹಳೇ ಟ್ಯಾಕ್ಸ್​ ಪದ್ಧತಿಗೆ ವಿದಾಯ ಹೇಳಿದ್ದೇವೆ. ದೇಶದಲ್ಲಿ ಭ್ರಷ್ಟಾಚಾರಕ್ಕೂ ನಾವು ಸವಾಲು ಹಾಕಿದ್ದೇವೆ ಎಂದರು.

ಸಪ್ತ ಸಾಗರದಾಚೆಗೂ ಮೋದಿ ಮೋಡಿ

370 ಮಿಲಿಯನ್​ಗೂ ಹೆಚ್ಚು ವ್ಯಕ್ತಿಗಳಿಗೆ ದೇಶದಲ್ಲಿ ಹೊಸ ಬ್ಯಾಂಕ್​ ಖಾತೆ ತೆರೆಸಿದ್ದೇವೆ. ದೇಶದ ಸಮಾಜಿಕ ಮತ್ತು ಆರ್ಥಿಕ ಬೆಳವಣಿಗೆಯೂ ವೇಗವಾಗಿ ಸಾಗುತ್ತಿದೆ. ದೇಶದಲ್ಲಿ ಕಳೆದ ಐದು ವರ್ಷಗಳಲ್ಲಿ 110 ಮಿಲಿಯನ್ ಶೌಚಾಲಯ ನಿರ್ಮಾಣ ಮಾಡಿದ್ದೇವೆ. 150 ಮಿಲಿಯನ್​ ವ್ಯಕ್ತಿಗಳಿಗೆ ನಾವು ಗ್ಯಾಸ್​ ಕನೆಕ್ಷನ್​​ ಮಾಡಿಸಿಕೊಟ್ಟಿದ್ದೇವೆ. ಗ್ರಾಮೀಣ ಮಟ್ಟದಲ್ಲಿ ರಸ್ತೆ ನಿರ್ಮಾಣ ಮಾಡಿಸಿದ್ದೇವೆ. ನಾವು ನಮಗೇ ಸವಾಲು ಹಾಕಿದ್ದೇವೆ ಮತ್ತು ನಾವು ಬದಲಾವಣೆಯತ್ತ ಸಾಗಿದ್ದೇವೆ. ನವಭಾರತವನ್ನು ಸಾಧ್ಯವಾಗಿಸುವಲ್ಲಿ ಎಲ್ಲರೂ ಕಾರ್ಯೋನ್ಮುಖರಾಗಿದ್ದಾರೆ. 'ಸಬ್ ಕಾ ಸಾಥ್ ಸಬ್​ ಕಾ ವಿಕಾಸ್' ಎನ್ನುವುದು ಭಾರತದ ಮಂತ್ರ. ಕೇವಲ ಒಬ್ಬ ಮೋದಿಯಿಂದಾಗಿ ಗೆಲುವು ಸಾಧ್ಯವಾಗಿಲ್ಲ. ಬದಲಾಗಿ ಎಲ್ಲಾ ಭಾರತೀಯರಿಂದ ಸಾಧ್ಯವಾಗಿದೆ ಎಂದರು.

ಐದು ವರ್ಷದ ನಮ್ಮ ಸರ್ಕಾರದ ಯಶಸ್ವಿ ಆಡಳಿತದ ಬಳಿಕ ಮತ್ತೆ ಹಿಂದಿನ ಗೆಲುವಿಗಿಂತಲೂ ದೊಡ್ಡ ಜಯ ಪಡೆದಿದ್ದೇವೆ. ಆರು ದಶಕದ ಬಳಿಕ ಪೂರ್ಣ ಬಹುಮತದಿಂದ ಸರ್ಕಾರ ರಚನೆಯಾಗಿದೆ. ಈ ಬಾರಿ ಮಹಿಳಾ ಮತದಾರರ ಸಂಖ್ಯೆಯೂ ಗಣನೀಯ ಏರಿಕೆಯಾಗಿತ್ತು. ಎಂಟು ಕೋಟಿ ಚೊಚ್ಚಲ ಮತದಾರರು ಈ ಬಾರಿ ಮತ ಚಲಾಯಿಸಿದ್ದಾರೆ ಎಂದು ಮೋದಿ ಹೇಳಿದರು.

7 ಭಾಷೆಗಳಲ್ಲಿ 'ಎಲ್ಲವೂ ಚೆನ್ನಾಗಿದೆ' ಎಂದ ಮೋದಿ...

ಈ ಕಾರ್ಯಕ್ರಮದ ಹೆಸರು ಹೌಡಿ ಮೋದಿ ಎಂದಿದೆ. ಆದರೆ ಮೋದಿ ಓರ್ವ ವ್ಯಕ್ತಿಯಲ್ಲ. ಅವರು 130 ಕೋಟಿ ಜನರ ಪ್ರತಿನಿಧಿ. 'ಹೇಗಿದೆ ಮೋದಿ' ಎಂದವರಿಗೆ ನನ್ನ ಉತ್ತರ, ಭಾರತದಲ್ಲಿ ಎಲ್ಲವೂ ಉತ್ತಮವಾಗಿದೆ ಎಂದು ಮೋದಿ ಹೇಳಿದರು. ಇನ್ನೂ ವಿಶೇಷವೆಂದರೆ ಕನ್ನಡ ಸೇರಿದಂತೆ ಭಾರತದ 7 ಭಾಷೆಗಳಲ್ಲಿ ಎಲ್ಲವೂ ಚೆನ್ನಾಗಿದೆ ಎಂದು ಮೋದಿ ಹೇಳಿದರು. ಈ ವೇಳೆ ಅಲ್ಲಿ ನೆರೆದಿದ್ದ ಅನಿವಾಸಿ ಬಾರತೀಯರೆಲ್ಲರೂ ತಮ್ಮ ತಮ್ಮ ಮಾತೃ ಭಾಷೆಯನ್ನು ಕೇಳಿ ಶಿಳ್ಳೆ, ಚಪ್ಪಾಳೆ ಮೂಲಕ ಕೇಕೆ ಹಾಕಿದರು.

ಕಾರ್ಯಕ್ರಮ ಸಂಘಟನೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಮೋದಿ, ಜಾಗದ ಸಮಸ್ಯೆಯಿಂದ ಸಾವಿರಾರು ಮಂದಿಗೆ ಈ ಕಾರ್ಯಕ್ರಮಕ್ಕೆ ಬರಲು ಸಾಧ್ಯವಾಗಿಲ್ಲ. ಅವರಲ್ಲಿ ನಾನು ಕ್ಷಮೆ ಕೇಳುತ್ತೇನೆ. ಎಲ್ಲರಿಗೂ ಹೃದಯ ತುಂಬಿದ ಸ್ವಾಗತ ಕೋರುತ್ತೇನೆ. ಕಾರ್ಯಕ್ರಮದ ಆಯೋಜಕರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಇದು 130 ಕೋಟಿ ಜನತೆಗೆ ಸೇರಿದ್ದು ಎಂದು ಹೇಳಿದರು.

'ಹೌಡಿ ಮೋದಿ' ಕಾರ್ಯಕ್ರಮ ಆಯೋಜನೆಯಾದ ದಿನದಿಂದ ಭಾರಿ ಪ್ರಚಾರ ಪಡೆದುಕೊಂಡಿತ್ತು. ಇದನ್ನು ಗಮನಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಾವೇ ಮುತುವರ್ಜಿ ವಹಿಸಿ ಸಮಾರಂಭದಲ್ಲಿ ಭಾಗಿಯಾಗುವುದಾಗಿ ಹೇಳಿದ್ದರು. 'ಹೌಡಿ ಮೋದಿ' ಕಾರ್ಯಕ್ರಮ ಅಮೆರಿಕನ್ನರನ್ನು ಮಾತ್ರವಲ್ಲದೇ ವಿಶ್ವದ ಗಮನವನ್ನೇ ತನ್ನತ್ತ ಸೆಳೆದಿದ್ದು, ಭಾರತದ ಕೀರ್ತಿ ಪತಾಕೆ ಸಪ್ತ ಸಾಗರದಾಚೆಯು ಹೆಮ್ಮೆಯಿಂದ ಹಾರಿದಂತಾಗಿದೆ.

ABOUT THE AUTHOR

...view details