ನವದೆಹಲಿ: ರಾಷ್ಟ್ರಪತಿಯಾಗಿ, ವಿಜ್ಞಾನಿಯಾಗಿ ಭಾರತದ ಅಭಿವೃದ್ಧಿಗೆ ಅಬ್ದುಲ್ ಕಲಾಂ ಅವರು ನೀಡಿದ ಕೊಡುಗೆಗಳನ್ನು ರಾಷ್ಟ್ರಪತಿ, ಉಪರಾಷ್ಟ್ರಪತಿ ಹಾಗು ಪ್ರಧಾನಿ ಕೊಂಡಾಡಿದ್ದಾರೆ.
ರಾಷ್ಟ್ರಪತಿ ಭವನದಲ್ಲಿ ಕಲಾಂ ಅವರ ಭಾವಚಿತ್ರಕ್ಕೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಪುಷ್ಪಾರ್ಚನೆ ಮಾಡುವ ಮೂಲಕ ಗೌರವ ಸಲ್ಲಿಸಿದ್ದಾರೆ.
ಭಾರತದ ಕ್ಷಿಪಣಿ ಜನಕ ಎಂದು ಕರೆಯುವ ಅಬ್ದುಲ್ ಕಲಾಂರ 89ನೇ ಜನ್ಮ ದಿನದ ಹಿನ್ನೆಲೆ ಪಿಎಂ ಮೋದಿ ಟ್ವೀಟ್ ಮೂಲಕ ಕಲಾಂ ಅವರಿಗೆ ಗೌರವ ಸಲ್ಲಿಸಿದ್ದಾರೆ.
"ರಾಷ್ಟ್ರಪತಿಯಾಗಿ, ವಿಜ್ಞಾನಿಯಾಗಿ ಭಾರತದ ಅಭಿವೃದ್ಧಿಗೆ ಅಬ್ದುಲ್ ಕಲಾಂ ಅವರು ಅಳಿಸಲಾಗದ ಕೊಡುಗೆಗಳನ್ನು ನೀಡಿದ್ದಾರೆ. ಅವರ ಜೀವನ ಮಾರ್ಗ ಲಕ್ಷಾಂತರ ಜನರಿಗೆ ಸ್ಫೂರ್ತಿದಾಯಕ" ಎಂದು ಮೋದಿ ಟ್ವೀಟ್ ಮಾಡಿದ್ದಾರೆ. ಕಲಾಂ ಅವರ ಸಾಧನೆಗಳ ಕುರಿತು ಈ ಹಿಂದೆ ಮೋದಿ ಮಾತನಾಡಿರುವ ವಿಡಿಯೋ ತುಣುಕನ್ನು ಸಹ ಟ್ಯಾಗ್ ಮಾಡಿದ್ದಾರೆ.
ಇದೇ ವೇಳೆ, ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರೂ ಕೂಡಾ ಕಲಾಂ ಸರಳತೆ, ಜ್ಞಾನವನ್ನು ಸ್ಮರಿಸಿ ಟ್ವೀಟ್ ಮಾಡಿದ್ದಾರೆ.
ಇನ್ನು ವಿಶ್ವಸಂಸ್ಥೆಯು ಕಲಾಂ ಅವರ ಜನ್ಮ ದಿನವನ್ನು 'ವಿಶ್ವ ವಿದ್ಯಾರ್ಥಿ ದಿನ'ವನ್ನಾಗಿ ಆಚರಿಸುತ್ತಿದೆ.
ಅಬ್ದುಲ್ ಕಲಾಂ ಅವರು 2002 ರಿಂದ 2007ರ ವರೆಗೆ ಭಾರತದ 11ನೇ ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿದ್ದರು. ವಿಜ್ಞಾನಿಯಾಗಿ ದೇಶದ ಕ್ಷಿಪಣಿ ಯೋಜನೆಗಳ ಅಭಿವೃದ್ಧಿಗೆ ಇವರ ಕೊಡುಗೆಗಾಗಿ ಕಲಾಂರನ್ನು 'ಭಾರತದ ಕ್ಷಿಪಣಿ ಮನುಷ್ಯ' ಎಂದೂ ಕರೆಯಲಾಗುತ್ತದೆ. ವಿಜ್ಞಾನ ಮತ್ತು ರಾಜಕೀಯ ಕ್ಷೇತ್ರದ ಕೊಡುಗೆಗಾಗಿ ಅವರಿಗೆ ಭಾರತದ ಅತ್ಯುನ್ನತ ನಾಗರಿಕ ಗೌರವ 'ಭಾರತ ರತ್ನ' ನೀಡಲಾಯಿತು.