ಕೋಲ್ಕತ್ತಾ : ಸ್ವಾಮಿ ವಿವೇಕಾನಂದರ ಜನ್ಮ ದಿನ ಹಿನ್ನೆಲೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೌರಾದ ಬೇಲೂರು ಮಠದಲ್ಲಿ ಇಂದು ಬೆಳಗ್ಗೆ ಪ್ರಾರ್ಥನೆ ಸಲ್ಲಿಸಿದ್ದಾರೆ.
ಕೋಲ್ಕತ್ತಾಕ್ಕೆ ಎರಡು ದಿನದ ಭೇಟಿ ಹಿನ್ನೆಲೆ ನಿನ್ನೆ ನಗರಕ್ಕೆ ಆಗಮಿಸಿರುವ ಮೋದಿ, ಇಂದು ಹೌರಾದಲ್ಲಿನ ರಾಮಕೃಷ್ಣ ಮಠ ಮತ್ತು ರಾಮಕೃಷ್ಣ ಮಿಷನ್ ಪ್ರಧಾನ ಕಚೇರಿ ಇರುವ ಬೇಲೂರು ಮಠದಲ್ಲಿ ಪ್ರಾರ್ಥನೆ ಸಲ್ಲಿಸಿದ್ದಾರೆ.
ಈ ವೇಳೆ ಮಾತನಾಡಿದ ಮೋದಿ, ದೇಶದಲ್ಲಿನ ಬದಲಾವಣೆಗಳನ್ನು ನಾವು ನೋಡಿದ್ದೇವೆ. ಯುವ ಪೀಳಿಗೆ ಭ್ರಷ್ಟಾಚಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿದೆ ಎಂದ ಅವರು, ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ಯುವಕರಿಗೆ ಅನೇಕ ಪ್ರಶ್ನೆಗಳಿವೆ. ಕೆಲವರಿಗೆ ವಾಸ್ತವ ಸಂಗತಿ ತಿಳಿದಿಲ್ಲ. ಸಿಎಎ ಪೌರತ್ವವನ್ನು ನೀಡುತ್ತದೆ ಎಂದು ನಾನು ಹೇಳಲು ಇಚ್ಚಿಸುತ್ತೇನೆ ಎಂದಿದ್ದಾರೆ.
ಪಾಕಿಸ್ತಾನದ ಅಲ್ಪಸಂಖ್ಯಾತ ನಿರಾಶ್ರಿತರು ಧಾರ್ಮಿಕ ಹಿಂಸಾಚಾರಕ್ಕೆ ಬಲಿಯಾಗಿದ್ದಾರೆ. ಮಾನವ ಹಕ್ಕುಗಳನ್ನು ಅವರಿಂದ ಕಸಿದುಕೊಳ್ಳಲಾಗುತ್ತದೆ. ಈ ಬಗ್ಗೆ ಪಾಕಿಸ್ತಾನ ಉತ್ತರ ನೀಡಬೇಕು. ಭಾರತದ ಈಶಾನ್ಯ ಭಾಗದಲ್ಲಿನ ಜನರಿಗೆ ಸಿಎಎಯಿಂದ ಯಾವುದೇ ದೋಷ ಇಲ್ಲ.ಪಾಕಿಸ್ತಾನದಲ್ಲಿ ಕಿರುಕುಳಕ್ಕೊಳಗಾದವರಿಗೆ ಮಾತ್ರ ಈ ಕಾನೂನು. ಯಾವುದೇ ಭಾರತೀಯರ ಪೌರತ್ವವನ್ನು ಕಸಿದುಕೊಳ್ಳುವ ಬಗ್ಗೆ ಅಲ್ಲ. ಸಿಎಎ ಪೌರತ್ವವನ್ನು ಕಸಿದುಕೊಳ್ಳುವುದಿಲ್ಲ, ಬದಲಾಗಿ ಪೌರತ್ವ ನೀಡುತ್ತದೆ ಎಂದ ಅವರು, ಭಾರತದಲ್ಲಿ ನಂಬಿಕೆ ಇರುವವರು ಮತ್ತು ಸಂವಿಧಾನವನ್ನು ನಂಬುವವರು ಭಾರತೀಯ ಪ್ರಜೆಯಾಗಬಹುದು ಎಂದು ಹೇಳಿದರು.