ನವದೆಹಲಿ:ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಕೇಂದ್ರ ಸಚಿವ ಸಂಪುಟದಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದ್ದು, ಕಬ್ಬು ಬೆಳೆಗಾರರಿಗೆ ನರೇಂದ್ರ ಮೋದಿ ಸರ್ಕಾರ ಭಾರಿ ಸಹಾಯಧನ ನೀಡಿ ಘೋಷಣೆ ಮಾಡಿದೆ. ಪ್ರತಿವರ್ಷ 60 ಲಕ್ಷ ಮೆಟ್ರಿಕ್ ಟನ್ ಸಕ್ಕರೆ ರಫ್ತು ಮಾಡಲಾಗುತ್ತಿದ್ದು, ಇದಕ್ಕಾಗಿ ಕೇಂದ್ರ ಸರ್ಕಾರ 6 ಸಾವಿರ 268 ಕೋಟಿ ರೂ.ಗಳ ಸಬ್ಸಿಡಿ ನೀಡಲು ಇಂದಿನ ಕ್ಯಾಬಿನೆಟ್ ಸಭೆಯಲ್ಲಿ ನಿರ್ಧರಿಸಿದ್ದು, ಅದು ನೇರವಾಗಿ ರೈತರ ಖಾತೆಗೆ ಸೇರ್ಪಡೆಯಾಗಲಿದೆ.
ಸಚಿವ ಸಂಪುಟ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿ ಮಾತನಾಡಿದ ಸಚಿವ ಪ್ರಕಾಶ್ ಜಾವ್ಡೇಕರ್ ಈ ಮಾಹಿತಿ ನೀಡಿದರು.
ದೇಶದಲ್ಲಿ ರೈತರು ಬೆಳೆಯುವ ಕಬ್ಬಿಗೆ ಈ ಸಬ್ಸಿಡಿ ಹಣ ದೊರೆಯಲಿದೆ. ಇದರ ಜತೆಗೆ ದೇಶದಲ್ಲಿ 75 ಮೆಡಿಕಲ್ ಕಾಲೇಜ್ ತೆರೆಯಲು ಇಂದಿನ ಕ್ಯಾಬಿನೆಟ್ನಲ್ಲಿ ನಿರ್ಧಾರ ಕೈಗೊಳ್ಳಲಾಗಿದ್ದು, ಇದಕ್ಕಾಗಿ 24 ಸಾವಿರ ಕೋಟಿ ರೂ ಮೀಸಲಿಡಲು ತೀರ್ಮಾಣ ಕೈಗೊಳ್ಳಲಾಗಿದ್ದು, ಇದರಿಂದ ದೇಶದ ತುಂಬ 15,700 ನೂತನ ಎಂಬಿಬಿಎಸ್ ಸೀಟು ನಿರ್ಮಾಣವಾಗಲಿವೆ ಎಂದು ತಿಳಿಸಿದರು.
ವೈದ್ಯರ ಸೇವೆ ಗ್ರಾಮೀಣ ಪ್ರದೇಶಗಳಿಗೂ ಅವರ ಸೇವೆ ಲಭ್ಯವಾಗುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಇದೇ ವೇಳೆ ಡಿಜಿಟಲ್ ಮಿಡಿಯಾದಲ್ಲಿ ಶೇ 26ರಷ್ಟು ವಿದೇಶಿ ಬಂಡವಾಳ ಹಾಗೂ ಗಣಿಗಾರಿಕೆಯಲ್ಲಿ ಶೇ 100ರಷ್ಟು ವಿದೇಶಿ ಬಂಡವಾಳ ಹೂಡಿಕೆ ಮಾಡಲು ಇಂದಿನ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ಕೇಂದ್ರ ಸಚಿವ ಪಿಯೂಷ್ ಗೋಯಲ್ ತಿಳಿಸಿದರು.