ನವದೆಹಲಿ:2002ರ ಗುಜರಾತ್ನ ಗೋಧ್ರಾ ಹತ್ಯಾಕಾಂಡ ಪ್ರಕರಣ ಸಂಬಂಧ ವಿಶೇಷ ತನಿಖಾ ತಂಡ (ಎಸ್‌ಐಟಿ) ಕೇಳಿದ 100 ಪ್ರಶ್ನೆಗಳಲ್ಲಿ ಒಂದು ಪ್ರಶ್ನೆಗೂ ತಪ್ಪಿಸಕೊಳ್ಳದೇ ಅಂದಿನ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಅವರು ಸುದೀರ್ಘ 9 ಗಂಟೆಗಳ ಮ್ಯಾರಥಾನ್‌ನಂತಹ ಪ್ರಶ್ನಾವಳಿ ಎದುರಿಸಿದ್ದರು. ತುಂಬ ಕೂಲ್ ಆಗಿ ಮತ್ತು ತನಿಖಾ ಅಧಿಕಾರಿಗಳಿಂದ ಒಂದೇ ಒಂದು ಕಪ್ ಟೀ ಸಹ ಸ್ವೀಕರಿಸಲಿಲ್ಲ ಎಂದು ಅಂದಿನ ತನಿಖಾ ತಂಡದ ಮುಖ್ಯಸ್ಥ ಆರ್.ಕೆ.ರಾಘವನ್ ತಮ್ಮ ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ.
ನರೇಂದ್ರ ಮೋದಿ ಅವರು ವಿಚಾರಣೆಗಾಗಿ ಗಾಂಧಿನಗರದ ಎಸ್‌ಐಟಿ ಕಚೇರಿಗೆ ಬರಲು ಒಪ್ಪಿಗೆ ಸೂಚಿಸಿದರು. ತಮ್ಮದೇ ನೀರಿನ ಬಾಟಲಿಯನ್ನು ಹಿಡಿದುಕೊಂಡು ಬಂದು ಎಸ್‌ಐಟಿಯ ವಿಚಾರಣೆ ಎದುರಿಸಿದ್ದರು ಎಂದು ರಾಘವನ್ ಅವರು ತಮ್ಮ ಆತ್ಮಚರಿತ್ರೆಯಾದ 'ಎ ರೋಡ್ ವೆಲ್ ಟ್ರಾವೆಲ್ಡ್'ನಲ್ಲಿ ಬರೆದಿದ್ದಾರೆ.
2002ರ ಗುಜರಾತ್ ಗಲಭೆ ಬಗ್ಗೆ ತನಿಖೆಗೆ ಸುಪ್ರೀಂಕೋರ್ಟ್ ನೇಮಿಸಿದ ಎಸ್‌ಐಟಿಯ ಮುಖ್ಯಸ್ಥರಾಗಿ ರಾಘವನ್ ಅವರಿದ್ದರು. ಪ್ರಧಾನ ತನಿಖಾ ಸಂಸ್ಥೆ ಸಿಬಿಐ ಮುಖ್ಯಸ್ಥರಾಗಿಯೂ ಸೇವೆ ಸಲ್ಲಿಸಿದ್ದರು. ಬೋಫೋರ್ಸ್ ಹಗರಣ, 2000ರ ದಕ್ಷಿಣ ಆಫ್ರಿಕಾ ಕ್ರಿಕೆಟ್ ಮ್ಯಾಚ್ ಫಿಕ್ಸಿಂಗ್ ಪ್ರಕರಣ ಮತ್ತು ಮೇವು ಹಗರಣ ಸೇರಿದಂತೆ ಹಲವು ಉನ್ನತ ತನಿಖೆಗಳಲ್ಲಿ ಭಾಗಿಯಾಗಿದ್ದರು.
ಅಂದಿನ ಗುಜರಾತ್ ಮುಖ್ಯಮಂತ್ರಿಯಾಗಿದ್ದ ಮೋದಿ ಅವರನ್ನು ವಿಚಾರಣೆಗೆ ಕರೆದಿದ್ದರ ಬಗ್ಗೆ ಪುಸ್ತಕದಲ್ಲಿ ಪ್ರಸ್ತಾಪಿಸಿದ ರಾಘವನ್, ಇದೇ ಉದ್ದೇಶಕ್ಕಾಗಿ ಅವರು ಎಸ್ಐಟಿ ಕಚೇರಿಗೆ ಖುದ್ದಾಗಿ ಬರಬೇಕು ಮತ್ತು ಅವರನ್ನು ಭೇಟಿಯಾಗಬೇಕು ಎಂದು ನಾವು ಅವರ ಸಿಬ್ಬಂದಿಗೆ ತಿಳಿಸಿದ್ದೆವು. ಬೇರೆ ಕಡೆ ವಿಚಾರಣೆ ನಡೆಸಿದ್ದರೆ ಅದು ತಪ್ಪಾಗಿ ಪರಿಗಣಿಸುವ ಸಾಧ್ಯತೆ ಇತ್ತು ಎಂದಿದ್ದಾರೆ.