ಝಾಲಾವಾರ್: ರಾಜಸ್ಥಾನದ ಝಾಲಾವಾರ್ ಜಿಲ್ಲೆಯಲ್ಲಿ ಅಕ್ರಮ ವಿದ್ಯುತ್ ಟ್ರಾನ್ಸ್‌ಫಾರ್ಮರ್ ತೆರವು ಮತ್ತು ವಿದ್ಯುತ್ ಕಳ್ಳತನವನ್ನು ಪರಿಶೀಲಿಸಲು ತೆರಳಿದ್ದ ವಿದ್ಯುತ್ ನಿಗಮದ ಅಧಿಕಾರಿಗಳ ತಂಡದ ಮೇಲೆ ಜನರು ದಾಳಿ ನಡೆಸಿದ್ದಾರೆ.
ವಿದ್ಯುತ್ ಕಳ್ಳತನದ ಆರೋಪ: ಪರಿಶೀಲನೆಗೆ ಬಂದಿದ್ದ ಅಧಿಕಾರಿಗಳ ಮೇಲೆ ಮಾರಣಾಂತಿಕ ಹಲ್ಲೆ - ಝಲಾವರ್ ಜಿಲ್ಲೆಯಲ್ಲಿ ಅಧಿಕಾರಿಗಳ ಮೇಲೆ ದಾಳಿ
ವಿದ್ಯುತ್ ಕಳ್ಳತನ ಬಗ್ಗೆ ಪರಿಶೀಲಿಸಲು ತೆರಳಿದ್ದ ವಿದ್ಯುತ್ ನಿಗಮದ ಅಧಿಕಾರಿಗಳನ್ನು ಜನರು ಹಿಗ್ಗಾಮುಗ್ಗಾ ಥಳಿಸಿದ್ದಾರೆ.
![ವಿದ್ಯುತ್ ಕಳ್ಳತನದ ಆರೋಪ: ಪರಿಶೀಲನೆಗೆ ಬಂದಿದ್ದ ಅಧಿಕಾರಿಗಳ ಮೇಲೆ ಮಾರಣಾಂತಿಕ ಹಲ್ಲೆ Jhalawar villagers attack team](https://etvbharatimages.akamaized.net/etvbharat/prod-images/768-512-9299790-171-9299790-1603552169945.jpg)
ವಿದ್ಯುತ್ ನಿಗಮದ ಅಧಿಕಾರಿಗಳ ಮೇಲೆ ಕೋಲುಗಳು ಮತ್ತು ಹರಿತವಾದ ಆಯುಧಗಳಿಂದ ಜನರು ಹಲ್ಲೆ ಮಾಡಿದ್ದಾರೆ. ಘಟನೆಯಲ್ಲಿ ಇಬ್ಬರು ಅಧಿಕಾರಿಗಳು ಗಾಯಗೊಂಡಿದ್ದು, ವಾಹನ ಜಖಂ ಆಗಿದೆ. ಘಟನೆ ಸಂಬಂಧ ಗ್ರಾಮದ ಕೆಲವರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.
ಈ ಬಗ್ಗೆ 'ಈಟಿವಿ ಭಾರತ'ಕ್ಕೆ ಪ್ರತಿಕ್ರಿಯೆ ನೀಡಿದ ಸಹಾಯಕ ಎಂಜಿನಿಯರ್ ಕುಲದೀಪ್ ಸಿಂಗ್, "ನಮ್ಮ ತಂಡಕ್ಕೆ ಅಕ್ರಮ ವಿದ್ಯುತ್ ಸಂಪರ್ಕಗಳ ಬಗ್ಗೆ ಮಾಹಿತಿ ಸಿಕ್ಕಿತ್ತು. ಲಾಡ್‌ಪುರ ಬಲ್ರಾಮ್ ಗ್ರಾಮದಲ್ಲಿ ಅಕ್ರಮ ಸಂಪರ್ಕಗಳನ್ನು ಪರೀಕ್ಷಿಸಲು ಮತ್ತು ಸಂಪರ್ಕ ಕಡಿತಗೊಳಿಸಲು ನಾವು ಅಲ್ಲಿಗೆ ಹೋದೆವು. ಕೋಪಗೊಂಡ ಗ್ರಾಮಸ್ಥರು ನಮ್ಮ ಅಧಿಕಾರಿಗಳನ್ನು ಕೋಲುಗಳಿಂದ ಹೊಡೆದು ನಮ್ಮ ವಾಹನಗಳನ್ನು ಧ್ವಂಸ ಮಾಡಿದರು. ನಮ್ಮ ವಾಹನಗಳು ಜಖಂ ಆಗಿದ್ದು, ನಮ್ಮ ಅಧಿಕಾರಿಗಳಿಗೆ ಗಂಭೀರ ಗಾಯಗಳಾಗಿವೆ" ಎಂದು ತಿಳಿಸಿದ್ದಾರೆ.