ಔರಂಗಾಬಾದ್(ಮಹಾರಾಷ್ಟ್ರ): ರಾಜ್ ಠಾಕ್ರೆ ನೇತೃತ್ವದ ಮಹಾರಾಷ್ಟ್ರ ನವನಿರ್ಮಾಣ ಸೇನಾ (ಎಂಎನ್ಎಸ್), ಪಾಕಿಸ್ತಾನ ಮತ್ತು ಬಾಂಗ್ಲಾದೇಶದ ಅಕ್ರಮ ನುಸುಳುಕೋರರ ಬಗ್ಗೆ ಮಾಹಿತಿ ನೀಡುವವರಿಗೆ 5 ಸಾವಿರ ರೂಪಾಯಿ ಬಹುಮಾನ ಪ್ರಕಟಿಸಿ ಪೋಸ್ಟರ್ ಅಂಟಿಸಿದೆ.
ಮಹಾರಾಷ್ಟ್ರದ ಔರಂಗಾಬಾದ್ನಲ್ಲಿ ಈ ರೀತಿಯ ಪೋಸ್ಟರ್ಗಳು ಕಂಡುಬಂದಿವೆ. ಪೋಸ್ಟರ್ನಲ್ಲಿ ರಾಜ್ ಠಾಕ್ರೆ ಫೋಟೋ ಇದ್ದು, ಬಾಂಗ್ಲಾದೇಶ ಮತ್ತು ಪಾಕಿಸ್ತಾನದಿಂದ ಬಂದ ನುಸುಳುಕೋರರ ಬಗ್ಗೆ ಮಾಹಿತಿ ನೀಡಿದ ಯಾರಿಗಾದರೂ 5 ಸಾವಿರ ನಗದು ಬಹುಮಾನ ನೀಡಲಾಗುವುದು ಎಂದು ಹೇಳಿಕೊಂಡಿದೆ.
ಫೆಬ್ರವರಿ 9 ರಂದು ಮುಂಬೈನ ಆಜಾದ್ ಮೈದಾನದಲ್ಲಿ ನಡೆದ ಬೃಹತ್ ರ‍್ಯಾಲಿ ಉದ್ದೇಶಿಸಿ ಮಾತನಾಡಿದ್ದ ಠಾಕ್ರೆ, ಸಿಎಎ ಮತ್ತು ನಾಗರಿಕರ ರಾಷ್ಟ್ರೀಯ ನೋಂದಣಿಯ ಅನುಷ್ಠಾನವನ್ನು ಸಮರ್ಥಿಸಿಕೊಂಡಿದ್ದರು. ಸಿಎಎ ಹಾಗೂ ಎನ್ಆರ್ಸಿ ವಿರೋಧಿಸಿ ದೇಶದೆಲ್ಲೆಡೆ ರ‍್ಯಾಲಿಗಳು ನಡೆಯುತ್ತಿವೆ. ಈ ರ‍್ಯಾಲಿಗಳಿಗೆ ನಾವು ಕೂಡಾ ರ‍್ಯಾಲಿ ನಡೆಸಿಯೇ ಉತ್ತರಿಸಿದ್ದೇವೆ. ಅಂತೆಯೇ ಕತ್ತಿಗೆ ಯಾವತ್ತೂ ಕತ್ತಿಯಿಂದಲೇ ಉತ್ತರಿಸಬೇಕು. ಕಲ್ಲಿಗೆ ಕಲ್ಲಿನಿಂದಲೇ ಉತ್ತರ ನೀಡಬೇಕು ಎಂದು ಸಿಎಎ ವಿರೋಧಿಗಳಿಗೆ ಠಾಕ್ರೆ ಖಡಕ್ ಸೂಚನೆ ರವಾನಿಸಿದ್ದರು.
ಇದೇ ವೇಳೆ ಪೌರತ್ವ ಕಾಯ್ದೆ ವಿರೋಧಿಸಿ ಪ್ರತಿಭಟಿಸುತ್ತಿರುವ ಮುಸ್ಲಿಮರ ಬಗ್ಗೆ ಮಾತನಾಡಿದ್ದ ಅವರು, ಮುಸ್ಲಿಮರು ಆಂದೋಲನ ನಡೆಸುತ್ತಿರುವ ಉದ್ದೇಶವೇ ನನಗೆ ಅರ್ಥವಾಗುತ್ತಿಲ್ಲ. ಈ ಕಾಯ್ದೆಯು ಇಲ್ಲಿ ಹುಟ್ಟಿರುವ ಮುಸ್ಲಿಂ ನಾಗರಿಕರಿಗೆ ಸಂಬಂಧಿಸಿಲ್ಲ ಎಂದಿದ್ದರು.