ಮಿರ್ಜಾಪುರ್ (ಉತ್ತರ ಪ್ರದೇಶ):ತಾನು ಪ್ರೀತಿಸುತ್ತಿದ್ದ ಹುಡುಗನ ಸಂಬಂಧದಲ್ಲಿ ಅಡೆತಡೆ ಸೃಷ್ಟಿ ಮಾಡಿದ್ದಕ್ಕಾಗಿ ಒಡಹುಟ್ಟಿದ ತಂಗಿಯನ್ನೇ ಅಕ್ಕ ಕೊಲೆ ಮಾಡಿಸಿರುವ ಘಟನೆ ಉತ್ತರ ಪ್ರದೇಶದ ಮಿರ್ಜಾಪುರ್ದಲ್ಲಿ ನಡೆದಿದೆ.
15 ವರ್ಷದ ಸಹೋದರಿ ತನ್ನ 10 ವರ್ಷದ ತಂಗಿಯನ್ನು ಗೆಳೆಯನ ಸಹಾಯದಿಂದ ಕೊಲೆ ಮಾಡಿಸಿದ್ದಾಳೆ. ಮಿರ್ಜಾಪುರ್ ಭರೂಹಿಯಾ ಗ್ರಾಮದ ರೈಲ್ವೆ ಹಳಿ ಮೇಲೆ ಆಕೆಯ ಶವ ಪತ್ತೆಯಾಗಿದೆ. ಕಳೆದ ಎರಡು ದಿನಗಳ ಹಿಂದೆ ಮನೆಯಿಂದ ಇಬ್ಬರು ಅಪ್ರಾಪ್ತ ಸಹೋದರಿಯರು ಕಾಣೆಯಾಗಿದ್ದಾಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿತ್ತು.
ಪ್ರಕರಣ ದಾಖಲಾಗುತ್ತಿದ್ದಂತೆ ಶೋಧ ಕಾರ್ಯ ಆರಂಭಿಸಿರುವ ಪೊಲೀಸರು ಸಿಸಿಟಿವಿ ಪರಿಶೀಲನೆ ನಡೆಸಿದಾಗ 15 ವರ್ಷದ ಅಂಜಲಿ ಪ್ರೇಮಿಯೊಂದಿಗೆ ಮೋಟಾರು ಬೈಕ್ನಲ್ಲಿ ಹೋಗಿರುವುದು ಸೆರೆಯಾಗಿದೆ. ಇದರ ಬೆನ್ನಲ್ಲೇ ತಂಗಿ ನಂದಿನಿ ಮೃತದೇಹ ರೈಲ್ವೆ ಹಳಿ ಮೇಲೆ ಶವವಾಗಿ ಪತ್ತೆಯಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಸಂಜಯ್ ವರ್ಮಾ ತಿಳಿಸಿದ್ದಾರೆ.
ತನ್ನ ತಂಗಿ ಸಂಬಂಧದಲ್ಲಿ ಅಡೆ-ತಡೆ ಸೃಷ್ಟಿ ಮಾಡಿದ್ದಕ್ಕಾಗಿ ಆಕೆಯ ಕೊಲೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಅಂಜಲಿ ತನ್ನ ಪ್ರೇಮಿ ಜತೆ ಪರಾರಿಯಾಗಿದ್ದು, ಇವರ ಮಾಹಿತಿ ನೀಡಿದವರಿಗೆ 25 ಸಾವಿರ ಬಹುಮಾನ ಘೋಷಣೆ ಮಾಡಲಾಗಿದೆ.