ನವದೆಹಲಿ: ಒಂದೊತ್ತಿನ ಊಟಕ್ಕಾಗಿ ದಿನಗೂಲಿ ಕೆಲಸ ಮಾಡುತ್ತಿದ್ದ ಕುಸ್ತಿಪಟು ಸನ್ನಿ ಜಾಧವ್ ಅವರನ್ನು ಗುರುತಿಸಿರುವ ಕ್ರೀಡಾ ಸಚಿವಾಲಯ, ಅವರಿಗೆ 2.5 ಲಕ್ಷ ರೂ.ಗಳ ಧನ ಸಹಾಯ ನೀಡಿದೆ.
ಧನಸಹಾಯ ದೊರಕಿರುವುದರಿಂದ ಮಧ್ಯಪ್ರದೇಶ ಮೂಲದ ಕುಸ್ತಿಪಟು ಸನ್ನಿ ಜಾಧವ್, ಇದೀಗ ತರಬೇತಿ ಪಡೆಯಬಹುದಾಗಿದೆ. ಅಲ್ಲದೇ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸ್ಪರ್ಧೆಗಳಲ್ಲಿ ಭಾಗವಹಿಸಲು ಸಾಧ್ಯವಾಗಲಿದೆ.
ಪಂಡಿತ್ ದೀನ್ದಯಾಳ್ ಉಪಾಧ್ಯಾಯ ರಾಷ್ಟ್ರೀಯ ಕಲ್ಯಾಣ ನಿಧಿಯಿಂದ ಜಾಧವ್‌ಗೆ ಆರ್ಥಿಕ ಸಹಾಯ ನೀಡಲಾಗಿದೆ.
ರಾಜಸ್ಥಾನದ ಚಿತ್ತೋರ್ಗರ್ದಲ್ಲಿ ನಡೆದ ಅಂಡರ್ -23 ಜೂನಿಯರ್ ನ್ಯಾಷನಲ್ ರೆಸ್ಲಿಂಗ್ ಚಾಂಪಿಯನ್‌ಶಿಪ್-2018 ಮತ್ತು ಭುವನೇಶ್ವರದ ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್ 2020 ರಲ್ಲಿ ನಡೆದ 60 ಕಿ.ಗ್ರಾಂ ಗ್ರೀಕೋ-ರೋಮನ್ ಸ್ಪರ್ಧೆಯಲ್ಲಿ ಜಾಧವ್ ಬೆಳ್ಳಿ ಪದಕ ಗೆದ್ದಿದ್ದಾರೆ.
ಓದಿ:ರೈತರು ರಾಷ್ಟ್ರದ ಜೀವನಾಡಿ, ಈ ಬಿಕ್ಕಟ್ಟಿನ ಸಮಯದಲ್ಲಿ ಒಗ್ಗಟ್ಟಾಗಿ ನಿಲ್ಲೋಣ ಎಂದ ಯುವಿ!
ಆದರೆ ಕಳೆದ ಕೆಲವು ತಿಂಗಳುಗಳಿಂದ ಅವರು ತಮ್ಮ ಕುಸ್ತಿ ಅಭ್ಯಾಸದ ನಂತರ, ಒಂದೊತ್ತಿನ ಊಟಕ್ಕಾಗಿ ಇತರರ ವಾಹನಗಳನ್ನು ಸ್ವಚ್ಛಗೊಳಿಸುವುದು ಸೇರಿದಂತೆ ಕಾರ್ಮಿಕ ಕೆಲಸಗಳನ್ನು ಮಾಡಬೇಕಾಗಿತ್ತು ಎಂದು ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.
ದೀನ್ದಯಾಳ್ ಉಪಾಧ್ಯಾಯ ನಿಧಿಯ ಮೂಲಕ ಕ್ರೀಡಾಪಟುಗಳಿಗೆ ತರಬೇತಿ, ಸಲಕರಣೆಗಳ ಖರೀದಿ ಮತ್ತು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಭಾಗವಹಿಸಲು 2.5 ಲಕ್ಷ ರೂ.ಗಳವರೆಗೆ ಹಣಕಾಸಿನ ನೆರವು ನೀಡಲಾಗುತ್ತದೆ.