ನವದೆಹಲಿ: ಇಂದು ಹೃದಯಘಾತದಿಂದ ನಿಧನರಾದ ರಾಜ್ಯ ಪೌರಾಡಳಿತ ಸಚಿವ ಸಿಎಸ್ ಶಿವಳ್ಳಿ ಅವರ ಅಕಾಲಿಕ ನಿಧನಕ್ಕೆ ಇಡೀ ರಾಜ್ಯವೇ ಕಂಬನಿ ಮಿಡಿದಿದೆ. ಇದರ ಮಧ್ಯೆ ಪ್ರಧಾನಿ ನರೇಂದ್ರ ಮೋದಿ ಕೂಡ ಸಂತಾಪ ಸೂಚಿಸಿದ್ದಾರೆ.
ಸಚಿವರ ಅಕಾಲಿಕ ಮರಣಕ್ಕೆ ಸಂತಾಪ ಸೂಚಿಸಿ ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ. ಕರ್ನಾಟಕ ಸಚಿವ ಶ್ರೀ ಸಿಎಸ್ ಶಿವಳ್ಳಿ ಅವರ ಅಕಾಲಿಕ ನಿಧನ ತುಂಬಲಾರದ ನಷ್ಟ. ಅವರ ಸಾವಿನ ನೋವು ಭರಿಸುವ ಶಕ್ತಿ ದೇವರು ಅವರ ಕುಟುಂಬ ಹಾಗೂ ಬೆಂಬಲಿಗರಿಗೆ ನೀಡಲಿ. ರಾಜ್ಯಕ್ಕೆ ಅವರು ನೀಡಿರುವ ಕೊಡುಗೆ ನಿಜಕ್ಕೂ ಅಪಾರ. ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಪ್ರಧಾನಿ ತಮ್ಮ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಅಣ್ಣಾವರ ಹಾಡು, ಚಿತ್ರಗಳೇ ಶಿವಳ್ಳಿ ಬದುಕಿಗೆ ಪ್ರೇರಣೆ.. :
ಸಚಿವ ಶಿವಳ್ಳಿ ರಾಜಕೀಯ ಜೀವನ ರೂಪಿಸಿದ್ದೇ ಡಾ. ರಾಜಕುಮಾರ್ ಚಿತ್ರಗಳು. ಅದರಲ್ಲೂ ಕಸ್ತೂರಿ ನಿವಾಸದಲ್ಲಿರುವ ಆಡಿಸಿ ನೋಡು ಬೀಳಿಸಿ ನೋಡು ಅವರನ್ನ ತುಂಬಾ ಸೆಳೆದಿತ್ತು. ಹಾಗಾಗಿ ಬದುಕಿನುದ್ದಕ್ಕೂ ಬಡವರಿಗೆ ಸಾಕಷ್ಟು ನೆರವಾಗುತ್ತಿದ್ದರು. ಕಷ್ಟ ಅಂದ್ರೇ ಕರಗಿ ಬಡವರಿಗೆ ಸಾಕಷ್ಟು ಸಹಾಯ ಮಾಡುತ್ತಿದ್ದರು ಶಿವಳ್ಳಿ. ಕಾರ್ಯಕ್ರಮವೊಂದರಲ್ಲಿ ಇದೇ ಸಚಿವ ಶಿವಳ್ಳಿ ಅಣ್ಣಾವ್ರ ಹಾಡು ಆಡಿಸಿ ನೋಡು ಬೀಳಿಸಿ ನೋಡು ಅಂತ ಹಾಡಿದ್ದರು. ಈಗ ಅದು ಸೋಷಿಯಲ್ ಮೀಡಿಯಾದಲ್ಲೂ ಸಾಕಷ್ಟು ಶೇರ್ ಆಗುತ್ತಿದೆ.
ಕುಂದಗೋಳ ವಿಧಾನಸಭೆ ಕ್ಷೇತ್ರ ಪ್ರತಿನಿಧಿಸುತ್ತಿದ್ದ ಶಿವಳ್ಳಿ ಮೂರನೇ ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. ಮೈತ್ರಿ ಸರ್ಕಾರದಲ್ಲಿ ಕಳೆದ ಕೆಲ ತಿಂಗಳ ಹಿಂದೆ ಸಚಿವ ಸ್ಥಾನ ಪಡೆದುಕೊಂಡಿದ್ದರು.