ಬರೇಲಿ(ಉತ್ತರ ಪ್ರದೇಶ): ಆರು ತಿಂಗಳ ವಲಸೆ ಕಾರ್ಮಿಕ ಗರ್ಭಿಣಿಗೆ ಬಸ್ನಲ್ಲೇ ಹೆರಿಗೆಯಾಗಿದೆ. ಆದ್ರೆ ದುರಾದೃಷ್ಟವೆಂಬಂತೆ ಅವಳಿ ಶಿಶುಗಳು ಕಣ್ಣು ಬಿಡುವ ಮುನ್ನವೇ ಚಿರನಿದ್ರೆಗೆ ಜಾರಿವೆ.
ಈ ಮಕ್ಕಳು ಜನಿಸಿದ ಒಂದು ಗಂಟೆಯಲ್ಲೇ ಸಾವಿಗೀಡಾಗಿವೆ. ಮಹಿಳೆಯನ್ನು ಕ್ವಾರಂಟೈನ್ ಮಾಡಲಾಗಿದ್ದು, ಗಂಟಲು ದ್ರವವನ್ನು ತೆಗೆದುಕೊಂಡು ಪರೀಕ್ಷೆಗೆ ಕಳುಹಿಸಲಾಗುವುದು ಎಂದು ವೈದ್ಯರು ತಿಳಿಸಿದ್ದಾರೆ.
ಫಾತಿಮಾ ಬಿ (24) ಮತ್ತು ಪತಿ ಮಿಥುನ್ ಮಿಯಾನ್ (26) ಪಶ್ಚಿಮ ಬಂಗಾಳದ ಕೂಚ್ ಬೆಹಾರ್ ಜಿಲ್ಲೆಯ ಮೂಲದವರಾಗಿದ್ದು, ಹಾಪುರ್ ಜಿಲ್ಲೆಯ ಇಟ್ಟಿಗೆ ಗೂಡುಗಳಲ್ಲಿ ಕೆಲಸ ಮಾಡುತ್ತಿದ್ದರು. ಲಾಕ್ ಡೌನ್ ಸಮಯದಲ್ಲಿ ಇಟ್ಟಿಗೆ ಗೂಡು ಸ್ಥಗಿತಗೊಂಡ ನಂತರ ಸರ್ಕಾರದ ಸಹಾಯದಿಂದ ಮನೆಗೆ ಮರಳಲು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿದ್ದರೂ ಕೂಡ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ ಎನ್ನಲಾಗ್ತಿದೆ. ಈ ಹಿನ್ನೆಲೆ ಈ ಇಬ್ಬರ ಜೊತೆ 42 ಜನರು ಸೇರಿ 1.2 ಲಕ್ಷ ರೂ. ಬಾಡಿಗೆ ನೀಡಿ ಬಸ್ ಮಾಡಿಕೊಂಡು ತಮ್ಮ ತವರೂರಿಗೆ ತೆರಳುತ್ತಿದ್ದರು.
ಬಸ್ನಲ್ಲೇ ಫಾತಿಮಾಗೆ ಹೆರಿಗೆಯಾದ ನಂತರ ಈ ದಂಪತಿಯನ್ನು ಬರೇಲಿಯ ಬಿತ್ರಿ ಚೈನ್‌ಪುರದ ರಾಷ್ಟ್ರೀಯ ಹೆದ್ದಾರಿ 24 ರಲ್ಲಿ ಚಾಲಕನು ಕೆಳಗಿಳಿಸಿದನು. ಅಲ್ಲಿಂದ ಆ್ಯಂಬುಲೆನ್ಸ್ ಮೂಲಕ ಅವರನ್ನು ಜಿಲ್ಲಾಸ್ಪತ್ರೆಗೆ ಕರೆದೊಯ್ಯಲಾಯಿತು.
ಜಿಲ್ಲಾಸ್ಪತ್ರೆಯಲ್ಲಿ ಫಾತಿಮಾ ಚಿಕಿತ್ಸೆ ಪಡೆಯುತ್ತಿದ್ದಾಳೆ. ಈಕೆಗೆ ಅಕಾಲಿಕವಾಗಿ ಹೆರಿಗೆಯಾದ್ದರಿಂದ ಎರಡೂ ಮಕ್ಕಳು ಚಿರನಿದ್ರೆಗೆ ಜಾರಿವೆ. ಮಹಿಳೆಯ ಆರೋಗ್ಯ ಸ್ಥಿರವಾಗಿದ್ದು, ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ವೈದ್ಯ ವರ್ಷಾ ಅಗರ್ವಾಲ್ ಮಾಹಿತಿ ನೀಡಿದ್ದಾರೆ.