ಆಹಾರ ಪೂರೈಕೆಯ ಕೊರತೆ,ಉದ್ಯೋಗದಾತರು-ಉದ್ಯೋಗಿಯ ನಡುವೆ ಸೂಕ್ಷ್ಮತೆ ಕಳೆದುಕೊಂಡ ಸಂಬಂಧ,ಆರೋಗ್ಯಕರವಾಗಿ ಇರದ ಜೀವನ ಪರಿಸ್ಥಿತಿ,ಹಣಕಾಸಿನ ಸಿದ್ಧತೆಯ ಕೊರತೆ ಮತ್ತು ಭಾರತಕ್ಕೆ ಹಿಂದಿರುಗುವ ಯಾವುದೇ ವಿಶ್ವಾಸಾರ್ಹ ಕ್ರಮಗಳು ಇಲ್ಲದೇ ಇರುವುದರಿಂದ ವಲಸೆ ಕಾರ್ಮಿಕರು ತಮ್ಮ ಬದುಕಿನ ಬಗೆಗೆ ಆಸೆ ಇರಿಸಿಕೊಳ್ಳದ ಸ್ಥಿತಿ ಒದಗಿ ಬಂದಿದೆ.
ಅಂತಾರಾಷ್ಟ್ರೀಯ ವಲಸೆ ಸಂಸ್ಥೆ (2020) ಪ್ರಕಟಿಸಿದ ವಿಶ್ವ ವಲಸೆ ವರದಿಯ ಪ್ರಕಾರ, ಜಗತ್ತಿನಲ್ಲಿ ವಲಸೆ ಹೋಗುವ ಜನರ ಸಂಖ್ಯೆ 28.9 ದಶಲಕ್ಷಕ್ಕೂ ಹೆಚ್ಚು ಇದೆ. ಕೊರೊನಾ ವೈರಸ್ ವಲಸೆ ಜನಸಂಖ್ಯೆಯ ಮೇಲೆ ಬೀರಿರುವ ಪ್ರಭಾವ ಪ್ರಪಂಚದ ಎಲ್ಲೆಡೆ ಇರುವ ಮಾನವ ಹಕ್ಕುಗಳ ಕಾರ್ಯಕರ್ತರ ಗಮನ ಸೆಳೆಯಿತು. ಅಂತಾರಾಷ್ಟ್ರೀಯ ಮಾಧ್ಯಮಗಳು ಸಹ ವ್ಯಾಪಕವಾಗಿ ಈ ಕುರಿತು ವರದಿ ಮಾಡಿವೆ.
ಭಾರತೀಯ ಕಾರ್ಮಿಕರ ವಲಸೆ :ಭಾರತದಿಂದ ಅಂತಾರಾಷ್ಟ್ರೀಯ ವಲಸೆ ಎಂಬುದು ಬಹು ಸಮಯದಿಂದ ನಡೆದುಕೊಂಡು ಬಂದಿದೆ. ಕೇಂದ್ರ ಸರ್ಕಾರದ ವಿದೇಶಾಂಗ ಸಚಿವಾಲಯದ ಪ್ರಕಾರ, ಪ್ರಸ್ತುತ 28.19 ದಶಲಕ್ಷ ಭಾರತೀಯರು ವಿದೇಶದಲ್ಲಿ ವಾಸ ಮಾಡುತ್ತಿದ್ದಾರೆ. ಈ ಅಂದಾಜಿನ ಪ್ರಕಾರ ಅನಿವಾಸಿ ಭಾರತೀಯರು(ಎನ್‌ಆರ್‌ಐ) 12.49 ದಶಲಕ್ಷ ಇದ್ದರೆ ಭಾರತೀಯ ಮೂಲದ ಜನರ (ಪಿಐಒ) ಸಂಖ್ಯೆ 15.59 ದಶಲಕ್ಷ ಎನ್ನುತ್ತದೆ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಮಾಹಿತಿ.
ವಿಶ್ವದ ವಿವಿಧ ಭಾಗಗಳಿಗೆ ಭಾರತೀಯರು ವಲಸೆ ಹೋಗುವುದು ಬಹಳ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಭಾರತ ಸರ್ಕಾರ ಪ್ರಕಟಿಸಿದ ಅಂತಾರಾಷ್ಟ್ರೀಯ ವಲಸೆ ಅಂದಾಜಿನ ಪ್ರಕಾರ, 4.5 ದಶಲಕ್ಷ ಭಾರತೀಯರು ಪ್ರಸ್ತುತ ಅಮೆರಿಕದಲ್ಲಿ(ಯುಎಸ್ಎ) ನೆಲೆಯೂರಿದ್ದಾರೆ. ಈ 3.5 ದಶಲಕ್ಷ ಜನರಲ್ಲಿ ಎನ್ಆರ್ಐಗಳು ಇದ್ದಾರೆ. ಕೊಲ್ಲಿ ದೇಶಗಳಲ್ಲಿ, 3.42 ದಶಲಕ್ಷ ಭಾರತೀಯ ಕಾರ್ಮಿಕರಿಗೆ ಯುನೈಟೆಡ್ ಅರಬ್ ಎಮಿರೇಟ್ಸ್ ಆತಿಥ್ಯ ಕಲ್ಪಿಸಿದೆ. ಇತರ ಜಿಸಿಸಿ (ಗಲ್ಫ್ ಸಹಕಾರ ಮಂಡಳಿ) ದೇಶಗಳು ಅಂದರೆ ಬಹ್ರೇನ್ನಲ್ಲಿ 10,391 ಮಂದಿ ಭಾರತೀಯರು, ಕುವೈತ್‌ನಲ್ಲಿ 1.02 ದಶಲಕ್ಷ ಭಾರತೀಯ ಕಾರ್ಮಿಕರು, ಒಮನ್ನಲ್ಲಿ 0.78 ದಶಲಕ್ಷ ಭಾರತೀಯರು ಇದ್ದಾರೆ. ಕತಾರ್ ದೇಶದಲ್ಲಿ 0.74 ದಶಲಕ್ಷ ಕಾರ್ಮಿಕರನ್ನು ಕಾಣಬಹುದು ಮತ್ತು ಸೌದಿ ಅರೇಬಿಯಾದಲ್ಲಿ 2.59 ದಶಲಕ್ಷ ಭಾರತೀಯರು ಕೆಲಸ ಮಾಡುತ್ತಿದ್ದಾರೆ. ಒಟ್ಟಾರೆಯಾಗಿ, ಜಿಸಿಸಿ ದೇಶಗಳಲ್ಲಿ ಸುಮಾರು 8.5 ದಶಲಕ್ಷ ಭಾರತೀಯ ಕಾರ್ಮಿಕರು ಇದ್ದಾರೆ. (ವಿದೇಶಾಂಗ ವ್ಯವಹಾರಗಳ ಸಚಿವಾಲಯ,ಎನ್.ಡಿ).
ಆರೋಗ್ಯ ಸಂಪನ್ಮೂಲಗಳ ಮಿತಿ ಇರುವಾಗ ಮತ್ತು ‘ಮಣ್ಣಿನ ಮಕ್ಕಳು’ ಆಂದೋಲನ ರೂಪುಗೊಳ್ಳುತ್ತಿರುವ ಹೊತ್ತಿನಲ್ಲಿ, ಪಿಐಒಗಳನ್ನು ಹೊರತುಪಡಿಸಿ ತಾಯ್ನೆಲದಿಂದ ಹೊರಗೆ ನೆಲೆಸಿರುವ 470 ದಶಲಕ್ಷ ಭಾರತೀಯರು ಆತಿಥೇಯ ಸಮುದಾಯದ ದೌರ್ಜನ್ಯಕ್ಕೆ ತುತ್ತಾಗುವ ಸಾಧ್ಯತೆ ಇದೆ. ಸ್ವತಃ ಭಾರತದಲ್ಲಿ ಲಾಕ್‌ಡೌನ್ ಮಾಡಲಾದ ಮೊದಲ ವಾರದಲ್ಲಿಯೇ ಈ ಸಂಗತಿ ಗಮನಾರ್ಹವಾಗಿ ಬೆಳಕಿಗೆ ಬಂದಿದ್ದು, ಭಾರತದ ಎಲ್ಲಾ ಭಾಗಗಳಿಂದ ಅಸಂಘಟಿತ ವಲಯದ ಕಾರ್ಮಿಕರು ತಮ್ಮ ಆತಿಥೇಯ ಸ್ಥಳ ತೊರೆದು ಸ್ವಂತ ಊರುಗಳತ್ತ ನಡೆಯಲು ಆರಂಭಿಸಿದರು.
ಜಿಸಿಸಿ ದೇಶಗಳಲ್ಲಿ ಭಾರತೀಯ ವಲಸಿಗ ಕಾರ್ಮಿಕರು
1970 ರ ನಂತರ ಗಮನಾರ್ಹ ಸಂಖ್ಯೆಯ ಭಾರತೀಯರು ಮಧ್ಯಪ್ರಾಚ್ಯಕ್ಕೆ ವಲಸೆ ಹೋದರು. ಒಪೆಕ್ ಸ್ಥಾಪನೆ ಬಳಿಕವಂತೂ ಭಾರತದಿಂದ ಪರ್ಷಿಯಾ ಕೊಲ್ಲಿಗೆ ಗಮನಾರ್ಹ ವಲಸೆ ಪ್ರಾರಂಭವಾಯಿತು. ಅಂದಿನಿಂದ, ದಕ್ಷಿಣ ಭಾರತದ ಅರೆ ಕುಶಲ ಮತ್ತು ಕೌಶಲ್ಯ ರಹಿತ ಕಾರ್ಮಿಕರು ಗಲ್ಫ್ ದೇಶಗಳಲ್ಲಿ ತೈಲ ಉದ್ಯಮ, ಸೇವೆಗಳು ಹಾಗೂ ನಿರ್ಮಾಣ ಕ್ಷೇತ್ರದಲ್ಲಿ ತಾತ್ಕಾಲಿಕ ವಲಸೆ ಯೋಜನೆಗಳ ಆಧಾರದ ಮೇಲೆ ಕೆಲಸ ಮಾಡುತ್ತಿದ್ದಾರೆ. ಬಹುತೇಕರು ದಕ್ಷಿಣ ಭಾರತದ ರಾಜ್ಯಗಳಾದ ತಮಿಳುನಾಡು, ಕೇರಳ, ತೆಲಂಗಾಣ ಹಾಗೂ ಆಂಧ್ರಪ್ರದೇಶದಿಂದ ಬಂದವರು.
ಈ ರಾಜ್ಯಗಳು ಕೊಲ್ಲಿ ರಾಷ್ಟ್ರಗಳೊಂದಿಗೆ ಚಾರಿತ್ರಿಕ ಸಂಪರ್ಕ ಪಡೆದಿವೆ ಮತ್ತು ಆ ರಾಜ್ಯಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮುಸ್ಲಿಮರು ಇದ್ದಾರೆ. 1970ರ ದಶಕದಲ್ಲಿ ಕೊಲ್ಲಿ ರಾಷ್ಟ್ರಗಳಿಗೆ ಅವರು ವಲಸೆ ಹೋದಾಗ ಆ ರಾಜ್ಯಗಳಲ್ಲಿ ನಿರುದ್ಯೋಗ ದೊಡ್ಡ ಪ್ರಮಾಣದಲ್ಲಿ ತಾಂಡವವಾಡುತ್ತಿತ್ತು. ಯಶಸ್ವಿ ವಲಸಿಗರು, ತಮ್ಮ ಹೆಚ್ಚಿನ ಗಳಿಕೆಯ ಜೊತೆಗೆ, ಬಳಿಕ ತಮ್ಮ ಊರು ಹಾಗೂ ಜಿಲ್ಲೆಗಳಲ್ಲಿ ಇತರ ಅನೇಕರಿಗೆ ಅನುಕರಣನೀಯ ವ್ಯಕ್ತಿಗಳಾಗಿ ಕಂಡು ಬಂದರು. ಕೊಲ್ಲಿಗೆ ವಲಸೆ ಹೆಚ್ಚಾಗಿ ಕೌಶಲ್ಯ ರಹಿತ ಕಾರ್ಮಿಕರನ್ನು 2-5 ವರ್ಷಗಳ ಕಾಲಮಿತಿಯ ಕರಾರಿನೊಂದಿಗೆ ಕರೆಸಿಕೊಳ್ಳುವ ಪರಿಪಾಠ ಆರಂಭ ಆಯಿತು.
ಹೊಸ ಒಪ್ಪಂದಕ್ಕೆ ಅರ್ಹತೆ ಪಡೆಯಲು ಅವರು ತಮ್ಮ ಕರಾರನ್ನು ಪೂರ್ಣಗೊಳಿಸಿದ ನಂತರ ತಾಯ್ನಾಡಿಗೆ ಮರಳಬೇಕಾಗಿತ್ತು. ಈ ದೇಶಗಳಿಗೆ ಕುಟುಂಬ ವಲಸೆ ವಿರಳವಾಗಿ ಇದೆ. ಏಕೆಂದರೆ ಮಧ್ಯಪ್ರಾಚ್ಯ ದೇಶಗಳ ಕಾನೂನು ಹೊರಗಿನವರು ಭೂಮಿ ಖರೀದಿಸದಂತೆ ತಡೆಯುತ್ತದೆ. ಆದ್ದರಿಂದ, ಕೊಲ್ಲಿ ರಾಷ್ಟ್ರಗಳಲ್ಲಿ ಕುಟುಂಬ ವಲಸೆ ಮತ್ತು ಏಕೀಕರಣ ಅಥವಾ ಶಾಶ್ವತ ನೆಲೆಯೂರುವಿಕೆ ಹಾಗೂ ಪೌರತ್ವ ಪಡೆಯಲು ಇರುವ ಅವಕಾಶ ತೀರಾ ಕಡಿಮೆ. 1983ರ ಭಾರತೀಯ ವಲಸೆ ಕಾಯ್ದೆ ಭಾರತೀಯ ಕಾರ್ಮಿಕರ ವಲಸೆ ಉದ್ಯೋಗ ಚಟುವಟಿಕೆಗಳನ್ನು ನಿಯಂತ್ರಿಸುತ್ತದೆ ಮತ್ತು ಕಾರ್ಮಿಕರ ರಕ್ಷಣೆ ಮತ್ತು ಕಲ್ಯಾಣವನ್ನು ನೋಡಿಕೊಳ್ಳುತ್ತದೆ. ಈ ಕಾಯ್ದೆಯ ಅಡಿ, ಎಲ್ಲಾ ನೇಮಕಾತಿ ಏಜೆನ್ಸಿಗಳು ಪ್ರೊಟೆಕ್ಟರ್ - ಜನರಲ್ ಆಫ್ ಇಮಿಗ್ರೆಂಟ್ಸ್ ಅಡಿಯಲ್ಲಿ ನೋಂದಣಿ ಮಾಡಿಕೊಳ್ಳಬೇಕು.
ವಿದೇಶಾಂಗ ಸಚಿವಾಲಯದ ಪ್ರಕಾರ, ಸುಮಾರು 8.5 ದಶಲಕ್ಷ ಭಾರತೀಯರು ಕೊಲ್ಲಿ ರಾಷ್ಟ್ರಗಳಲ್ಲಿ ವಾಸ ಮಾಡುತ್ತಿದ್ದಾರೆ. 2019 ರಲ್ಲಿ ಶೇ 45ರಷ್ಟು ಭಾರತೀಯ ಕಾರ್ಮಿಕರು ಸೌದಿ ಅರೇಬಿಯಾಕ್ಕೆ ಹೋದರೆ, ನಂತರದ ಸ್ಥಾನದಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್ (ಶೇ 22 ), ಕುವೈತ್ ( ಶೇ 13 ), ಕತಾರ್ ( ಶೇ 9 ), ಒಮನ್ ( ಶೇ 8) ಮತ್ತು ಬಹ್ರೇನ್ (ಶೇ 3) ಇವೆ. ಕೊಲ್ಲಿಯಲ್ಲಿ ಹೆಚ್ಚಿನ ಭಾರತೀಯರು ಕೌಶಲ್ಯರಹಿತ ಅಥವಾ ಅರೆ ಕುಶಲಕರ್ಮಿಗಳಾಗಿದ್ದರೂ ಕೂಡ, ಭಾರತೀಯ ವಲಸೆಗಾರರ ಉನ್ನತ ಮಟ್ಟದ ಸಮಿತಿಯ (2003) ಅಂದಾಜಿನ ಪ್ರಕಾರ ಶೇ 20 ರಷ್ಟು ಜನರು ವೈಟ್ - ಕಾಲರ್ ಕೆಲಸಗಾರರು ಮತ್ತು ಇನ್ನೂ ಶೇ 10 ರಷ್ಟು ಮಂದಿ ವೃತ್ತಿಪರ ವರ್ಗಕ್ಕೆ ಸೇರಿದವರು.
1999 ಮತ್ತು 2007 ರ ನಡುವೆ ಕೊಲ್ಲಿ ರಾಷ್ಟ್ರಗಳಿಗೆ ಅರೆ ಕುಶಲಿ ಅಥವಾ ಕೌಶಲ್ಯ ರಹಿತ ಭಾರತೀಯ ಕಾರ್ಮಿಕರ ವಲಸೆ ಪ್ರಮಾಣ ( ಸುಮಾರು 160,000 ರಿಂದ 777,000 ರವರೆಗೆ ) ನಾಲ್ಕು ಪಟ್ಟು ಹೆಚ್ಚು ಇತ್ತು.. 2007 ರಲ್ಲಿ ಕೊಲ್ಲಿ ರಾಷ್ಟ್ರಗಳಿಗೆ ಹೋಗುವ ಎಲ್ಲಾ ಕಾರ್ಮಿಕರಲ್ಲಿ ಶೇ 96ರಷ್ಟು ಮಂದಿಗೆ ವಲಸೆ ತೆರವು ಪರಿಶೀಲನೆ ಅಗತ್ಯವಿರುತ್ತದೆ (ವಾರ್ಷಿಕ ವರದಿ -2012,ವಲಸೆಗಾರರ ರಕ್ಷಣಾ ಜನರಲ್ ಕಚೇರಿ,ವಿದೇಶಾಂಗ ವ್ಯವಹಾರಗಳ ಸಚಿವಾಲಯ).