ಹೈದರಾಬಾದ್ :ಕೋವಿಡ್ ನಿಯಂತ್ರಿಸಲು ಘೋಷಿಸಿದ್ದ ಲಾಕ್‌ಡೌನ್ ಹೆಚ್ಚು ಪರಿಣಾಮ ಬೀರಿರುವವರಲ್ಲಿ ವಲಸೆ ಕಾರ್ಮಿಕರು ಪ್ರಮುಖರು. ಲಾಕ್ಡೌನ್ನಿಂದಾಗಿ ಎಲ್ಲಾ ಚುಟುವಟಿಕೆಗಳು ಸ್ಥಗಿತಗೊಂಡು ಕಾರ್ಮಿಕರು ಬೇರೆ ದಾರಿ ಕಾಣದೆ ನಗರ ಪ್ರದೇಶಗಳಿಂದ ತಮ್ಮ ಸ್ವಂತ ಊರುಗಳಿಗೆ ತೆರಳಿದ್ದಾರೆ. ಹೀಗಾಗಿ ಲಕ್ಷಾಂತರ ಜನ ತಮ್ಮ ಜೀವನೋಪಾಯ ಕಳೆದುಕೊಂಡು ನಿರುದ್ಯೋಗ ಮತ್ತು ಬಡತನದಿಂದ ಕಂಗೆಟ್ಟಿದ್ದಾರೆ.
ಇದು ದೇಶದೊಳಗಿನ ಕಥೆಯಾದರೆ, ಉದ್ಯೋಗ ಅರಸಿ ಹೊರ ರಾಷ್ಟ್ರಗಳಿಗೆ ತೆರಳಿದವರ ಸ್ಥಿತಿಯೂ ಹೀಗೆ ಇದೆ. ಆಹಾರ ಮತ್ತು ವಸತಿಗಾಗಿ ಅಲ್ಪ ಹಣವೂ ಇಲ್ಲದೆ ವಿವಿಧ ರಾಷ್ಟ್ರಗಳಲ್ಲಿ ಅವರು ಸಿಕ್ಕಿ ಹಾಕಿಕೊಂಡಿದ್ದಾರೆ. ಉದ್ಯೋಗ ಇರುವವರಿಗೆ ಕಡಿಮೆ ವೇತನ ಸಿಗುತ್ತಿದೆ. ಇಕ್ಕಟ್ಟಾದ ಸ್ಥಳಗಳಲ್ಲಿ ಕೆಲಸ ಮಾಡುತ್ತಿರುವುದರಿಂದ ಹೆಚ್ಚಿನ ಕಾರ್ಮಿಕರಿಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಇದು ಕೊರೊನಾ ಸೋಂಕು ಹರಡಲು ಕಾರಣವಾಗಬಹುದು ಎಂದು ಅಂತಾರಾಷ್ಟ್ರೀಯ ಕಾರ್ಮಿಕ ಸಂಸ್ಥೆ (ಐಎಲ್ಒ)ನ ಕೆಲಸ ಮತ್ತು ಸಮಾನತೆಯ ಷರತ್ತು ವಿಭಾಗದ ನಿರ್ದೇಶಕ ಮ್ಯಾನುಯೆಲಾ ಟೋಮಿ ಹೇಳಿದ್ದಾರೆ.
ಕೆಲಸ ಮಾಡುತ್ತಿರುವ ದೇಶಗಳಲ್ಲಿ ಲಾಕ್‌ಡೌನ್ ವಿಧಿಸಿದ ಹಿನ್ನೆಲೆ ಮಿಲಿಯನ್ ಗಟ್ಟಲೆ ವಲಸೆ ಕಾರ್ಮಿಕರು ತಮ್ಮ ಉದ್ಯೋಗ ಕಳೆದುಕೊಂಡಿದ್ದಾರೆ. ದುರ್ಬಲ ಆರ್ಥಿಕತೆ ಮತ್ತು ಹೆಚ್ಚುತ್ತಿರುವ ನಿರುದ್ಯೋಗದಿಂದ ಅವರಿಗೆ ಸ್ವಂತ ದೇಶಗಳಿಗೆ ಮರಳುವ ನಿರೀಕ್ಷೆಯಿದೆ ಎಂದು ನಮಗೆ ತಿಳಿದಿದೆ. ಈ ಬಿಕ್ಕಟ್ಟನ್ನು ನಿವಾರಿಸಲು ಸಹಕಾರ ಮತ್ತು ಯೋಜನೆ ಪ್ರಮುಖವಾಗಿದೆ ಎಂದು ಟೋಮಿ ಹೇಳಿದ್ದಾರೆ. ವಿಶ್ವ ಸಂಸ್ಥೆಯ ವರದಿಯ ಪ್ರಕಾರ, ಜಾಗತಿಕ ಆರ್ಥಿಕತೆಯ ಇಂಜಿನ್ಗಳಾಗಿರುವ ಸಣ್ಣ ಮತ್ತು ಮಧ್ಯಮ ಮಟ್ಟದ ಉದ್ಯಮಗಳು ಅಪಾರ ನಷ್ಟ ಅನುಭವಿಸುತ್ತಿವೆ. ಇದರಿಂದಾಗಿ ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ ಮತ್ತು ದುರ್ಬಲವಾದ ಸನ್ನಿವೇಶಗಳಲ್ಲಿ ವಾಸಿಸುವವರು ಅತ್ಯಂತ ದೊಡ್ಡ ಮಟ್ಟದ ಸಂಕಷ್ಟ ಎದುರಿಸುತ್ತಿದ್ದಾರೆ.