ನವದೆಹಲಿ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ದ ಉಪ ಗವರ್ನರ್ ಹುದ್ದೆಗೆ ವಿರಲ್ ಆಚಾರ್ಯ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಬಹುದಿನಗಳ ಬಳಿಕ ಮೈಕೆಲ್ ದೇಬಬ್ರತಾ ಪಾತ್ರ ಅವರನ್ನು ನೇಮಿಸಲಾಗಿದೆ.
ಸಿಬ್ಬಂದಿ ಮತ್ತು ತರಬೇತಿ ಇಲಾಖೆ (ಡಿಒಪಿಟಿ) ನೀಡಿರುವ ಹೇಳಿಕೆಯ ಪ್ರಕಾರ, ಅವರ ಅಧಿಕಾರಾವಧಿ ಮೂರು ವರ್ಷಗಳ ಕಾಲ ಇರಲಿದೆ. ಕಳೆದ ವರ್ಷ ಜುಲೈ 23 ರಂದು ವಿರಲ್ ಆಚಾರ್ಯ, ಡೆಪ್ಯೂಟಿ ಗವರ್ನರ್ ಹುದ್ದೆಗೆ ರಾಜೀನಾಮೆ ನೀಡಿದ ನಂತರ ಈ ಹುದ್ದೆ ಖಾಲಿಯಾಗಿತ್ತು.
ಸೆಂಟ್ರಲ್ ಬ್ಯಾಂಕಿನ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಅವರು ವಿತ್ತೀಯ ನೀತಿ ವಿಭಾಗದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದ್ದರು. ಪಾತ್ರಾ ಅವರ ನೇಮಕದೊಂದಿಗೆ, ಆರ್‌ಬಿಐ ಈಗ ನಾಲ್ಕು ಉಪ ಗವರ್ನರ್‌ಗಳನ್ನು ಹೊಂದಿದಂತಾಗಿದ್ದು,ಆಚಾರ್ಯರು ನಿರ್ವಹಿಸುತ್ತಿದ್ದ ಹಣಕಾಸು ನೀತಿ ಇಲಾಖೆಯನ್ನು ಅವರು ನಿರ್ವಹಿಸಲಿದ್ದಾರೆ.