ನವದೆಹಲಿ:ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ 21 ದಿನಗಳ ಲಾಕ್‌ಡೌನ್‌ನಿಂದ ಯಾರು ಯಾರು ವಿನಾಯಿತಿ ಮತ್ತು ಹೆಚ್ಚುವರಿ ಸೇವೆಗಳನ್ನು ಪಡೆಯಬಹುದೆಂದು ಕೇಂದ್ರ ಗೃಹ ಸಚಿವಾಲಯ ಕೆಲವು ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.
ಈ ಹೊಸ ಮಾರ್ಗಸೂಚಿ ಪ್ರಕಾರ, ಭಾರತೀಯ ರಿಸರ್ವ್ ಬ್ಯಾಂಕ್ ಮತ್ತು ಆರ್‌ಬಿಐ ನಿಯಂತ್ರಿತ ಹಣಕಾಸು ಮಾರುಕಟ್ಟೆ, ವೇತನ ಮತ್ತು ಖಾತೆ ಅಧಿಕಾರಿಗಳು, ಸಿಎಜಿಯ ಕ್ಷೇತ್ರ ಅಧಿಕಾರಿಗಳು, ಪೆಟ್ರೋಲಿಯಂ ಉತ್ಪನ್ನಗಳು, ಪೂರೈಕೆ ಸರಪಳಿ ಮತ್ತು ಅರಣ್ಯ ಸಿಬ್ಬಂದಿಯನ್ನು ಲಾಕ್‌ಡೌನ್ ವ್ಯಾಪ್ತಿಯಿಂದ ಮುಕ್ತಗೊಳಿಸಲಾಗಿದೆ ಎಂದು ಸಚಿವಾಲಯ ತಿಳಿಸಿದೆ.
ಎಂಹೆಚ್‌ಎಯಿಂದ ಹೊಸ ಮಾರ್ಗಸೂಚಿಗಳು ವಿಮಾನ ನಿಲ್ದಾಣ, ರೈಲ್ವೆ ನಿಲ್ದಾಣಗಳಲ್ಲಿ ಸರಕು ಕಾರ್ಯಾಚರಣೆ ಮಾಡುವವರು, ಕಲ್ಲಿದ್ದಲು ಗಣಿಗಾರಿಕೆ ಚಟುವಟಿಕೆ, ದೆಹಲಿ ಮೂಲದ ರೆಸಿಡೆಂಟ್ ಕಮಿಷನರ್ ಅಧಿಕಾರಿಗಳು ಮತ್ತು ಸಿಬ್ಬಂದಿ, ಬಂದರುಗಳು ಮತ್ತು ಭೂ ಗಡಿಗಳಲ್ಲಿ ಕಸ್ಟಮ್ಸ್ ಕ್ಲಿಯರೆನ್ಸ್ ನಿರ್ವಹಿಸುವ ಅಧಿಕಾರಿಗಳಿಗೆ ವಿನಾಯಿತಿ ನೀಡಲಾಗಿದೆ.
ಅರಣ್ಯ ಕಚೇರಿಗಳ ಸಿಬ್ಬಂದಿ ಮತ್ತು ಮೃಗಾಲಯಗಳನ್ನು ನೋಡಿಕೊಳ್ಳುವವರು, ನರ್ಸರಿ, ಅಗ್ನಿಶಾಮಕ ಸಿಬ್ಬಂದಿ, ಗಸ್ತು ತಿರುಗುವವರು ಹಾಗೂ ಅಗತ್ಯ ಸಾರಿಗೆ ಚಾಲಕರು, ಮಕ್ಕಳು, ವಿಕಲಚೇತನರು, ಹಿರಿಯ ನಾಗರಿಕರು, ನಿರ್ಗತಿಕ ಮಹಿಳೆಯರು, ಸಾಮಾಜಿಕ ಕಾರ್ಯ ಮಾಡುವವರಿಗೆ ರಿಯಾಯಿತಿ ನೀಡಲಾಗಿದೆ ಎಂಬ ಮಾರ್ಗ ಸೂಚಿಗಳನ್ನು ಸರ್ಕಾರ ಹೊರಡಿಸಿದೆ.