ಶ್ರೀನಗರ: ಗಡಿ ನಿಯಂತ್ರಣ ರೇಖೆಯ (ಎಲ್‌ಒಸಿ) ಎರಡೂ ಬದಿಗಳಲ್ಲಿ ಅಘಡಗಳು ಹೆಚ್ಚಾಗುತ್ತಿರುವುದು ಬೇಸರದ ಸಂಗತಿ. ಭಾರತ ಮತ್ತು ಪಾಕಿಸ್ತಾನ ತಮ್ಮ ರಾಜಕೀಯ ಬದಿಗಿಟ್ಟು ಮಾತುಕತೆ ನಡೆಸಲು ಪ್ರಾರಂಭಿಸಬೇಕು ಎಂದು ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ) ಅಧ್ಯಕ್ಷೆ ಮೆಹಬೂಬಾ ಮುಫ್ತಿ ಕೋರಿದ್ದಾರೆ.
ಪಾಕಿಸ್ತಾನ ಶುಕ್ರವಾರ ಕದನ ವಿರಾಮ ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಉಭಯ ದೇಶಗಳ ಎಲ್‌ಒಸಿಯಲ್ಲಿ ಗುಂಡಿನ ಕಾಳಗ ನಡೆಯಿತು. ಈ ವೇಳೆ ಎರಡೂ ಕಡೆಯವರು ಪ್ರಾಣ ಕಳೆದುಕೊಂಡಿದ್ದಾರೆ. ಇದರ ಬೆನ್ನಲ್ಲೇ ಮಫ್ತಿ ಅವರ ಅಭಿಪ್ರಾಯ ಹೊರಬಿದ್ದಿದೆ.
ಮಾಜಿ ಪ್ರಧಾನಿ ದಿ. ವಾಜಪೇಯಿ ಮತ್ತು ಪಾಕಿಸ್ತಾನದ ಮಾಜಿ ಅಧ್ಯಕ್ಷ ಜನರಲ್ ಪರ್ವೇಜ್ ಮುಷರಫ್ ಅವರು ಜಾರಿಗೆ ತಂದಿದ್ದ ಕದನ ವಿರಾಮ ಪುನಃ ಸ್ಥಾಪಿಸಲು ಇದುವೇ ಅತ್ಯುತಮ ಸಮಯವಾಗಿದೆ ಎಂದು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಹೇಳಿದ್ದಾರೆ.
ಗಡಿ ನಿಯಂತ್ರಣ ರೇಖೆಯ ಎರಡೂ ಬದಿಗಳಲ್ಲಿ ಹೆಚ್ಚುತ್ತಿರುವ ಸಾವು-ನೋವುಗಳನ್ನು ನೋಡುವುದು ಬೇಸರ ಆಗುತ್ತದೆ. ಭಾರತ ಮತ್ತು ಪಾಕಿಸ್ತಾನದ ನಾಯಕರು ತಮ್ಮ ರಾಜಕೀಯ ಬದಿಗಿಟ್ಟು ಸಾಧ್ಯವಾದರೆ ಮಾತುಕತೆ ಪ್ರಾರಂಭಿಸಲಿ. ವಾಜಪೇಯಿ ಜೀ ಮತ್ತು ಮುಷರಫ್ ಸಹಾಬ್ ಅವರು ಒಪ್ಪಿದ ಮತ್ತು ಜಾರಿಗೆ ತಂದಿದ್ದ ಕದನ ವಿರಾಮ ಪುನಃ ಸ್ಥಾಪಿಸುವುದು ಇದು ಉತ್ತಮ ಸಮಯವಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.