ಶಿಲ್ಲಾಂಗ್ (ಮೆಘಾಲಯ) :ಇಲ್ಲಿನ ಪೂರ್ವ ಕಾಸಿ ಹಿಲ್ಸ್ ಜಿಲ್ಲೆಯ ಹಳ್ಳಿಯೊಂದರ ನಿವಾಸಿಗಳು ಕೋವಿಡ್-19 ರೋಗಿಯ ಸಂಪರ್ಕಕ್ಕೆ ಬಂದ ನಂತರ ಸ್ಥಳೀಯ ಆಡಳಿತದ ಆದೇಶದ ಮೇರೆಗೆ ಸ್ವ ನಿರ್ಬಂಧ ಹಾಕಿಕೊಂಡಿದ್ದಾರೆ.
70 ಮನೆಗಳಿರುವ ಮಾವಥಾರಿಯಾ ಎಂಬ ಗ್ರಾಮದ ಯುವತಿಯೊಬ್ಬಳಿಗೆ ಈ ಸೋಂಕು ಕಾಣಿಸಿಕೊಂಡಿದ್ದು, ಈಕೆ ಮೇಘಾಲಯದಲ್ಲಿ ಕೊರೊನಾದಿಂದ ಸಾವಿಗೀಡಾದ ಒಬ್ಬನೇ ವ್ಯಕ್ತಿ ಡಾ. ಜಾನ್ ಸೈಲೊ ರೈಂಟಾಥಿಯಾಂಗ್‌ಗೆ ಮನೆಯಲ್ಲಿ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದಳು. ಆ ಸಂದರ್ಭದಲ್ಲಿ ರೋಗಿಯ ಸಂಪರ್ಕಕ್ಕೆ ಬಂದ ಯುವತಿಗೆ ಕೊರೊನಾ ಆವರಿಸಿದೆ.
ಮಹಿಳೆಯನ್ನು ಶಿಲ್ಲಾಂಗ್‌ನ ಕೋವಿಡ್ -19 ಆಸ್ಪತ್ರೆಗೆ ಕಳುಹಿಸಲಾಗಿದ್ದು, ಆಕೆಯ ಕುಟುಂಬ ಸದಸ್ಯರು ಸೇರಿದಂತೆ 18 ಮನೆಯ 35 ಮಂದಿಯನ್ನು ಹೋಮ್ ಕ್ವಾರಂಟೈನ್ನಲ್ಲಿಡಲಾಗಿದೆ. ಈಗಾಗಲೇ ಅವರಿಗೆ ಕೊರೊನಾ ಟೆಸ್ಟ್ ಮಾಡಲಾಗಿದ್ದು, ಅವರ ಮಾದರಿಗಳು ನೆಗೆಟಿವ್ ಬಂದಿವೆ ಎಂದು ಗ್ರಾಮದ ಮುಖ್ಯಸ್ಥ ಬಿ. ಸುಟಿಂಗ್ ಹೇಳಿದ್ದಾರೆ.
ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳುವ ಮೂಲಕ ನಿರ್ಬಂಧಿತ ಕುಟುಂಬಗಳಿಗೆ ಆಹಾರ, ನೀರು ಮತ್ತು ಇತರ ಅಗತ್ಯ ಸರಕುಗಳನ್ನು 'ದೋರ್ಬಾರ್' ಅಥವಾ ಗ್ರಾಮ ಸಮಿತಿಯ ಮೂಲಕ ಮನೆಗಳಿಗೆ ತಲುಪಿಸಲಾಗುತ್ತಿದೆ ಎಂದರು.