ನಾರಾಯಣಪುರ (ಛತ್ತೀಸಗಢ): ಇಲ್ಲಿನ ಅಬುಝಮಾಡ ಪ್ರದೇಶದ ಓರ್ಚಾ ವಲಯದ ಆರೋಗ್ಯ ಇಲಾಖೆ ಸಿಬ್ಬಂದಿ 70 ಕಿಮೀ ದಟ್ಟ ಅರಣ್ಯದಲ್ಲಿ ನಡೆದು ಹೋಗಿ 3 ತಿಂಗಳ ಅವಳಿ ಮಕ್ಕಳಿಗೆ ಅಗತ್ಯವಿದ್ದ ತುರ್ತು ವೈದ್ಯಕೀಯ ಚಿಕಿತ್ಸೆ ನೀಡಿದ್ದಾರೆ. ನಕ್ಸಲ್ ಪೀಡಿತ ಪ್ರದೇಶದಲ್ಲಿ ತಮ್ಮ ಜೀವದ ಹಂಗು ತೊರೆದು ಪ್ರಯಾಣಿಸಿ, ಅಪೌಷ್ಟಿಕತೆಯಿಂದ ಬಳಲುತ್ತಿದ್ದ ಶಿಶುಗಳಿಗೆ ಚಿಕಿತ್ಸೆ ನೀಡಿದ ಈ ಆರೋಗ್ಯ ಕಾರ್ಯಕರ್ತರ ಸೇವೆ ಎಲ್ಲರಿಗೂ ಮಾದರಿಯಾಗಿದೆ.
ದಟ್ಟಾರಣ್ಯದಲ್ಲಿ 70 ಕಿಮೀ ನಡೆದು ಮಕ್ಕಳ ಪ್ರಾಣ ಉಳಿಸಿದ ಆರೋಗ್ಯ ಸಿಬ್ಬಂದಿ! - ಪೌಷ್ಟಿಕ ಆರೋಗ್ಯ ಕೇಂದ್ರ
ನಕ್ಸಲ್ ಪೀಡಿತ ಪ್ರದೇಶದಲ್ಲಿ ತಮ್ಮ ಜೀವದ ಹಂಗು ತೊರೆದು ಪ್ರಯಾಣಿಸಿ, ಅಪೌಷ್ಟಿಕತೆಯಿಂದ ಬಳಲುತ್ತಿದ್ದ ಶಿಶುಗಳಿಗೆ ಚಿಕಿತ್ಸೆ ನೀಡಿದ ಆರೋಗ್ಯ ಕಾರ್ಯಕರ್ತರ ಸೇವೆ ಎಲ್ಲರಿಗೂ ಮಾದರಿಯಾಗಿದೆ.
ಸ್ಥಳದಲ್ಲಿ ಚಿಕಿತ್ಸೆ ನೀಡಿದ ನಂತರ ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿದ್ದ ಮಕ್ಕಳು ಹಾಗೂ ತಾಯಿಯನ್ನು ಕುಂಡ್ಲಾ ಪೌಷ್ಟಿಕ ಆರೋಗ್ಯ ಕೇಂದ್ರಕ್ಕೆ ಸ್ಥಳಾಂತರಿಸಲಾಯಿತು. ದಟ್ಟ ಅರಣ್ಯದಲ್ಲಿರುವ ಈ ಪ್ರದೇಶವು ನಕ್ಸಲರ ಭದ್ರಕೋಟೆ ಎಂದೇ ಹೆಸರಾಗಿದೆ. ಇಂಥ ಪ್ರದೇಶದಲ್ಲಿ ಪ್ರಯಾಣಿಸಿ ಚಿಕಿತ್ಸೆ ನೀಡಿದ ಆರೋಗ್ಯ ಸಿಬ್ಬಂದಿಯ ಕಾರ್ಯಕ್ಕೆ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗುತ್ತಿದೆ.
ಮಕ್ಕಳು ಹಾಗೂ ತಾಯಿಯನ್ನು ಹೇಗೋ ಮಾಡಿ ತಲುಪಿದ ನಂತರ ಮತ್ತೊಂದು ಸಮಸ್ಯೆ ಎದುರಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ತಾಯಿ ಹಾಗೂ ಮಕ್ಕಳನ್ನು ಅರಣ್ಯದ ಹಳ್ಳಿಯಿಂದ ಹೊರಗೆ ಕಳುಹಿಸಲು ಕುಟುಂಬಸ್ಥರು ಒಪ್ಪಲಿಲ್ಲ. ಕೊನೆಗೂ ಅವರ ಮನವೊಲಿಸಿ ತಾಯಿ, ಮಕ್ಕಳನ್ನು ಕುಂಡ್ಲಾ ಪೌಷ್ಟಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಯಿತು. ಸುಮಾರು ಮೂರು ದಿನಗಳ ಕಾಲ ಒಟ್ಟು 70 ಕಿಮೀ ದೂರವನ್ನು ಆರೋಗ್ಯ ಸಿಬ್ಬಂದಿ ಕ್ರಮಿಸಿ, ಚಿಕಿತ್ಸೆ ನೀಡಿದ್ದಾರೆ.