ಲಕ್ನೋ/ಉತ್ತರ ಪ್ರದೇಶ:ಗೊಂಡಾ ಜಿಲ್ಲೆಯ ಹಳ್ಳಿಯೊಂದರಲ್ಲಿ ಕೆಲವು ದುಷ್ಕರ್ಮಿಗಳು ದೇವಾಲಯದ ಅರ್ಚಕರೊಬ್ಬರ ಮೇಲೆ ಗುಂಡು ಹಾರಿಸಿರುವ ಘಟನೆಯನ್ನು ಬಿಎಸ್ಪಿ ನಾಯಕಿ ಮಾಯಾವತಿ ಖಂಡಿಸಿದ್ದಾರೆ.
ಈ ಕುರಿತು ಹಿಂದಿಯಲ್ಲಿ ಟ್ವೀಟ್ ಮಾಡಿರುವ ಮಾಯಾವತಿ, ರಾಜಸ್ಥಾನದಂತೆ ದೇವಾಲಯದ ಭೂಮಿಯನ್ನು ಆಕ್ರಮಿಸಿಕೊಳ್ಳುವ ಉದ್ದೇಶದಿಂದ ಅರ್ಚಕರ ಮೇಲೆ ಮಾರಣಾಂತಿಕ ದಾಳಿ ನಡೆದಿರುವುದು ಬಹಳ ನಾಚಿಕೆಗೇಡಿನ ಸಂಗತಿ. ಸಂತನ ಸರ್ಕಾರವಿರುವ ನಾಡಿನಲ್ಲಿ ಸಂತರಿಗೆ ರಕ್ಷಣೆಯಿಲ್ಲ. ಇದಕ್ಕಿಂತ ಕೆಟ್ಟ ಕಾನೂನು ಸುವ್ಯವಸ್ಥೆ ಇರಲು ಸಾಧ್ಯವೇ? ಎಂದು ಪರೋಕ್ಷವಾಗಿ ಸಿಎಂ ಯೋಗಿ ಆದಿತ್ಯನಾಥ್ಗೆ ಟಾಂಗ್ ನೀಡಿದ್ದಾರೆ.
ಪ್ರಕರಣದ ಅಪರಾಧಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಮತ್ತು ಘಟನೆಗೆ ಸಂಬಂಧಿಸಿದ ಎಲ್ಲಾ ಭೂ ಮಾಫಿಯಾಗಳ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆ ಅವರು ಯುಪಿ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.