ನವದೆಹಲಿ:ಉತ್ತರ ಪ್ರದೇಶದಲ್ಲಿ ಬೃಹತ್ ರಾಮನ ಪ್ರತಿಮೆ ನಿರ್ಮಾಣ ಮಾಡಲು ಸಾರ್ವಜನಿಕ ಹಣ ವ್ಯಯಿಸುತ್ತಿರುವಾಗ, ನನ್ನ ಪ್ರತಿಮೆ ನಿರ್ಮಾಣ ಮಾಡಿರುವುದರಲ್ಲಿ ತಪ್ಪೇನು ಎಂದು ಬಿಎಸ್ಪಿ ಅಧಿನಾಯಕಿ ಮಾಯಾವತಿ ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಈ ಸಂಬಂಧ ಕೋರ್ಟ್ಗೆ ಅಫಿಡವಿಟ್ ಸಲ್ಲಿಸಿರುವ ಮಾಯಾ ಅವರು, ಪ್ರತಿಮೆ ನಿರ್ಮಾಣ ಜನರ ಇಚ್ಛೆಯಾಗಿತ್ತು ಎಂದು ಹೇಳಿದ್ದಾರೆ.
ತಾವು ಮುಖ್ಯಮಂತ್ರಿಯಾಗಿದ್ದಾಗೆ ನೂರಾರು ದಲಿತ ನಾಯಕರೊಂದಿಗೆ ತಮ್ಮ ಪ್ರತಿಮೆಯನ್ನೂ ನಿರ್ಮಿಸಿಕೊಳ್ಳಲು ಸಾರ್ವಜನಿಕರ ಹಣ ವ್ಯಯ ಮಾಡಿದ್ದ ಸಂಬಂಧ ವ್ಯಕ್ತಿಯೊಬ್ಬರು ಕೋರ್ಟ್ನಲ್ಲಿ ದಾವೆ ಹೂಡಿದ್ದು, ಈ ಕುರಿತು ಮಾಯಾ ಸಮರ್ಥನೆ ನೀಡಿದರು.
ಪ್ರತಿಮೆಗಳ ನಿರ್ಮಾಣ ಈಗ ಶುರುವಾಗಿದಲ್ಲ ನೆಹರೂ, ಇಂದಿರಾ ಅವರ ಪ್ರತಿಮೆಗಳೂ ಇವೆ. ಅದೂ ಕೂಡ ನಿರ್ಮಾಣವಾಗಿರುವುದು ಸಾರ್ವಜನಿಕರ ಹಣದಲ್ಲಿ. ಗುಜರಾತ್ನಲ್ಲಿ ಪಟೇಲರ ಪ್ರತಿಮೆ ನಿರ್ಮಾಣಕ್ಕೆ 3ಸಾವಿರ ಕೋಟಿ ವೆಚ್ಚ ಮಾಡಲಾಗಿದೆ. ಉತ್ತರ ಪ್ರದೇಶದಲ್ಲಿ 200 ಕೋಟಿ ರೂ ವೆಚ್ಚದಲ್ಲಿ ರಾಮನ ಪ್ರತಿಮೆ ನಿರ್ಮಾಣವಾಗುತ್ತಿದೆ. ಮಹಾರಾಷ್ಟ್ರದಲ್ಲಿ ಶಿವಾಜಿ ಪ್ರತಿಮೆ ಕೂಡ ನಿರ್ಮಾಣವಾಗಲಿದೆ ಇದೆಕ್ಕೆಲ್ಲ ಸಾರ್ವಜನಿಕರ ಹಣ ಬಳಸಲಾಗಿದೆ. ವಿಷಯ ಹೀಗಿರುವಾಗ ನನ್ನ ಪ್ರತಿಮೆ ಸ್ಥಾಪನೆ ಮಾಡುವುದರಲ್ಲಿ ತಪ್ಪೇನಿದೆ ಎಂದು ಮಾಯಾ ಹೇಳಿದ್ದಾರೆ.