ನವದೆಹಲಿ: ಕರ್ನಾಟಕ, ಕೇರಳ, ಗೋವಾ ಸೇರಿದಂತೆ ಮುಂಬೈ ನಗರ ಸುತ್ತಲಿನ ಪ್ರದೇಶಗಳಲ್ಲಿ ಧಾರಾಕಾರ ಮಳೆ ಸುರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಅರಬ್ಬಿ ಸಮುದ್ರದಲ್ಲಿ ಉಂಟಾಗಿರುವ ವಾಯು ಭಾರ ಕುಸಿತ ಇಂದು ತೀವ್ರ ಸ್ವರೂಪ ಪಡೆದುಕೊಳ್ಳಲಿದೆ. ಕೇರಳ, ಕರ್ನಾಟಕ, ಕೊಂಕಣ, ಗೋವಾ ಒಳಗೊಂಡು ಪಶ್ಚಿಮ ಕರಾವಳಿಯುದ್ದಕ್ಕೂ ತೀವ್ರ ಮಳೆಯ ಪ್ರಮಾಣವು ಮುಂದುವರಿಯುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಜಮ್ಮು ಮತ್ತು ಕಾಶ್ಮೀರದ ಪಶ್ಚಿಮ ಭಾಗ, ಉತ್ತರ ಪಂಜಾಬ್, ಉತ್ತರ ಪ್ರದೇಶದ ಪಶ್ಚಿಮ ಭಾಗದ ಜಿಲ್ಲೆಗಳು, ರಾಜ್ಯ, ಪೂರ್ವ ಮಧ್ಯ ಪ್ರದೇಶ, ದಕ್ಷಿಣ ಒಡಿಶಾ, ಪಶ್ಚಿಮ ಬಂಗಾಳದ ಗಂಗಾನದಿ ವ್ಯಾಪ್ತಿ, ಜಾರ್ಖಂಡ್, ಚತ್ತೀಸ್‌ಗಢ, ಆಂಧ್ರಪ್ರದೇಶ ಮತ್ತು ತೆಲಂಗಾಣದ ಕರಾವಳಿ ವ್ಯಾಪ್ತಿಯಲ್ಲಿ 3-4 ಗಂಟೆಗಳ ಕಾಲ ಮಳೆ ಸುರಿಯಬಹುದು ಎಂದು ಐಎಂಡಿ ಹೇಳಿದೆ.
ಹಿಮಾಚಲ ಪ್ರದೇಶ, ಉತ್ತರಾಖಂಡ್, ಉತ್ತರ ಪ್ರದೇಶ, ಬಿಹಾರ, ಜಾರ್ಖಂಡ್, ಪಶ್ಚಿಮ ಬಂಗಾಳ, ಸಿಕ್ಕಿಂ, ಅರುಣಾಚಲಪ್ರದೇಶ, ಕೊಂಕಣ, ಗೋವಾ, ಅಸ್ಸಾಂ, ಮೇಘಾಲಯದಲ್ಲಿ ಮುಂದಿನ ಐದು ದಿನಗಳ ಕಾಲ ಧಾರಾಕಾರ ಮಳೆಯಾಗಲಿದೆ ಎಂದು ವಾರದ ಹಿಂದೆಯೇ ಭವಿಷ್ಯ ನುಡಿದಿತ್ತು.