ಗಿಲ್ಗಿಟ್-ಬಾಲ್ಟಿಸ್ತಾನ್: ಪ್ರಧಾನಿ ಇಮ್ರಾನ್ ಖಾನ್ ಅವರ ಪಾಕಿಸ್ತಾನ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಪಕ್ಷದ ಪರ ಫಲಿತಾಂಶ ಬರುತ್ತಿರುವ ಹಿನ್ನೆಲೆ ಗಿಲ್ಗಿಟ್ ಬಾಲ್ಟಿಸ್ತಾನದ ವಿಧಾನಸಭಾ ಚುನಾವಣೆಯ ಮತದಾನದ ವೇಳೆ ಗೋಲ್ಮಾಲ್ ಆಗಿದೆ ಎಂದು ಆರೋಪಿಸಿ ಭಾರೀ ಪ್ರತಿಭಟನೆ ನಡೆಯುತ್ತಿದೆ.
ವಿಧಾನಸಭೆಯ 24 ಕ್ಷೇತ್ರಗಳಿಗೆ ಗಿಲ್ಗಿಟ್-ಬಾಲ್ಟಿಸ್ತಾನದಲ್ಲಿ ಭಾನುವಾರ ಚುನಾವಣೆ ನಡೆಯಿತು. ಬೆಂಬಲಿಗರೊಂದಿಗೆ ಮಾತನಾಡುವಾಗ ಪಾಕಿಸ್ತಾನ ಪೀಪಲ್ಸ್ ಪಾರ್ಟಿ (ಪಿಪಿಪಿ) ಅಧ್ಯಕ್ಷ ಬಿಲಾವಾಲ್ ಭುಟ್ಟೋ ಜರ್ದಾರಿ, ನಿಮ್ಮ ಆಯ್ಕೆಯನ್ನು ಕಡೆಗಣಿಸಲಾಗಿದೆ. ಗಿಲ್ಗಿಟ್-ಬಾಲ್ಟಿಸ್ತಾನದ ಮತಗಳನ್ನು ಕಳವು ಮಾಡಲಾಗಿದೆ ಎಂದಿದ್ದಾರೆ.
ಪಾಕಿಸ್ತಾನ ಮುಸ್ಲಿಂ ಲೀಗ್-ನವಾಜ್ (ಪಿಎಂಎಲ್-ಎನ್) ಉಪಾಧ್ಯಕ್ಷ ಮರಿಯಮ್ ನವಾಜ್ ಷರೀಫ್ ಕೂಡ ಪ್ರತಿಭಟನಾಕಾರರ ಗುಂಪನ್ನುದ್ದೇಶಿಸಿ ಮಾತನಾಡಿದರು. "ಯಾರೇ ನಮ್ಮ ಮೇಲೆ ದಬ್ಬಾಳಿಕೆ ಮಾಡಿದರೂ ನಾವು ಅವರ ವಿರುದ್ಧ ಎದ್ದು ನಿಂತು ಹೋರಾಡಿ ಸಾಯುತ್ತೇವೆ. ಇಂದು ಚುನಾವಣಾ ಪೂರ್ವ ರಿಗ್ಗಿಂಗ್ ಮೂಲಕ ನಮ್ಮ ಆದೇಶವನ್ನು ಕಳವು ಮಾಡಲಾಗಿದೆ. ನಮ್ಮ ಬೇಡಿಕೆಗಳನ್ನು ಈಡೇರಿಸುವವರೆಗೆ ನಾವು ಪ್ರತಿಭಟನೆ ಮುಂದುವರಿಸುತ್ತೇವೆ" ಎಂದು ಪ್ರತಿಭಟನಾಕಾರರೊಬ್ಬರು ಹೇಳಿದ್ದಾರೆ.
ಈ ನಡುವೆ ಗಿಲ್ಗಿಟ್-ಬಾಲ್ಟಿಸ್ತಾನ್ ಚುನಾವಣೆ ಒಂದು 'ಹಗರಣ' ಎಂದು ಮಾನವ ಹಕ್ಕುಗಳ ಕಾರ್ಯಕರ್ತ ಅಮ್ಜದ್ ಅಯೂಬ್ ಮಿರ್ಜಾ ಹೇಳಿದ್ದಾರೆ.
ಭಾರತದ ಅವಿಭಾಜ್ಯ ಅಂಗವೆನಿಸಿದ ಗಿಲ್ಗಿಟ್-ಬಾಲ್ಟಿಸ್ತಾನದಲ್ಲಿ ಚುನಾವಣೆ ನಡೆಸುವುದನ್ನು ಭಾರತ ತೀವ್ರವಾಗಿ ವಿರೋಧಿಸಿದ್ದರೂ ಅದನ್ನು ಕಡೆಗಣಿಸಿ ಪಾಕ್ ಆಕ್ರಮಿತ ಕಾಶ್ಮೀರದ ಗಿಲ್ಗಿಟ್-ಬಾಲ್ಟಿಸ್ತಾನ ವಿಧಾನಸಭೆಗೆ ಚುನಾವಣೆಯನ್ನು ಪಾಕ್ ಸರ್ಕಾರ ನಡೆಸಿತ್ತು.