ನವದೆಹಲಿ :ಕಳೆದ ಮೂರು ತಿಂಗಳಿನಿಂದ ವಿಶ್ವವನ್ನೇ ಅಲುಗಾಡಿಸುತ್ತಿರುವ ಕೊರೊನಾ ವೈರಸ್, ತನ್ನ ಅಟ್ಟಹಾಸವನ್ನ ನಡೆಸಿದೆ. ಮಾರ್ಚ್ ತಿಂಗಳಲ್ಲಿ ಬಹುಪರಿಚಿತ ಗಣ್ಯ ವ್ಯಕ್ತಿಗಳೇ ಸೋಂಕಿಗೆ ಒಳಗಾಗಿದ್ದಾರೆ.
ಇಂದು ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಅವರಿಗೆ ಕೊವಿಡ್-19 ಇರುವುದು ದೃಢಪಟ್ಟಿದೆ. ಈ ಮೂಲಕ ವಿಶ್ವದಲ್ಲೇ ಉನ್ನತ ಸ್ಥಾನದಲ್ಲಿರುವ ವ್ಯಕ್ತಿಗೆ ಸೋಂಕು ತಗುಲಿದಂತಾಗಿದೆ. ಸೆಲ್ಫ್ ಐಸೋಲೇಷನ್ನಲ್ಲಿದ್ದರೂ ಸಹ ಸರ್ಕಾರವನ್ನು ನಡೆಸುತ್ತೇನೆ. ವಿಡಿಯೋ ಕಾನ್ಫ್‌ರೆನ್ಸ್ ಮೂಲಕ ಕೊರೊನಾ ವಿರುದ್ಧ ಹೋರಾಡುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಪ್ರಧಾನಿ ಬೋರಿಸ್ ಜಾನ್ಸನ್ ಬೆನ್ನಲ್ಲೇ ಬ್ರಿಟನ್ ಆರೋಗ್ಯ ಸಚಿವ ಮ್ಯಾಟ್ ಹ್ಯಾನ್ಕಾಕ್ ಅವರಿಗೂ ಕೋವಿಡ್-19 ಇರುವುದು ದೃಢವಾಗಿದೆ.
ಕಳೆದ ವಾರ ಇಂಗ್ಲೆಂಡ್ ರಾಜಕುಮಾರ ಚಾರ್ಲ್ಸ್ ಕೂಡ ಸೋಂಕಿಗೊಳಗಾಗಿದ್ದರು. ಸ್ಕಾಟ್ಲೆಂಡ್ನಲ್ಲಿ ಸೆಲ್ಫ್ ಐಸೋಲೇಷನ್ಗೊಳಗಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೂ ಮನೆಯಿಂದಲೇ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಕ್ಲಾರೆನ್ಸ್ ಹೌಸ್ ಪ್ರಕಟಣೆಯಲ್ಲಿ ತಿಳಿಸಿತ್ತು. ಮಾ.13 ರಂದು ಕೆನಡಾ ಪ್ರಧಾನಿ ಜಸ್ಟಿನ್ ಟ್ರೂಡೋ ಅವರ ಪತ್ನಿ ಸೋಫಿಯಾ ಗ್ರೆಗೊರಿಯಾ ಅವರಿಗೂ ಕೊರೊನಾ ವೈರಸ್ ಇರುವುದು ಸಾಬೀತಾಗಿತ್ತು.