ನವದೆಹಲಿ :ಮಸೂದ್ ಅಜರ್ ಸಾಕಿ ಸಲುಹುತ್ತಿರುವ ಪಾಕ್‌ಗೆ ಚೀನಾ ಬೆಂಗಾವಲಾಗಿದೆ. ಅದಕ್ಕಾಗಿ ಚೀನಾ-ಪಾಕ್ ವಿರುದ್ಧ ಭಾರತದಲ್ಲಿ ಸಾಕಷ್ಟು ಆಕ್ರೋಶವಿದೆ. ಈಗ ದೇಶದಲ್ಲಿರುವ 7 ಕೋಟಿ ವ್ಯಾಪಾರಸ್ಥರು ಚೀನಾ ವಸ್ತುಗಳ ವಿರುದ್ಧ ದೊಡ್ಡ ಸಮರ ಸಾರಿದ್ದಾರೆ. ಮಾರ್ಚ್ 19ಕ್ಕೆ ದೇಶಾದ್ಯಂತ ದೊಡ್ಡ ಅಭಿಯಾನ ನಡೆಸಲು ಕರೆಕೊಟ್ಟಿದ್ದಾರೆ.
ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಹಾಗೂ ಪ್ರಧಾನ ಮಂತ್ರಿ ನರೇಂದ್ರ ಮೋದಿ ಚೀನಾ ವಸ್ತುಗಳ ವಿರುದ್ಧ 7 ಕೋಟಿ ವ್ಯಾಪಾರಸ್ಥರು :
ಕಾನ್ಫಿಡಿರೇಷನ್ ಆಫ್ ಇಂಡಿಯನ್ ಟ್ರೇಡರ್ಸ್ ಅಸೋಸಿಯೇಷನ್ (CAIT) ಅಂದ್ರೇ ಅಖಿಲ ಭಾರತೀಯ ವ್ಯಾಪಾರಸ್ಥರ ಒಕ್ಕೂಟ. ಇದೇ CAIT ಈಗ boycott Chinese goods ಅಂತಾ ರಾಷ್ಟ್ರಮಟ್ಟದ ಅಭಿಯಾನ ನಡೆಸುತ್ತಿದೆ. ದೇಶದ 1,500 ಕಡೆಗೆ ಚೀನಾ ವಸ್ತುಗಳನ್ನ ಹೋಳಿ ಹುಣ್ಣಿಮೆ ದಿನ ಸುಟ್ಟು ಪ್ರತಿಭಟನೆ ನಡೆಸಲು CAIT ಕರೆ ಕೊಟ್ಟಿದೆ. ಚೀನಾ ವಸ್ತುಗಳ ಮಾರಾಟ ಹೆಚ್ಚಿರುವ ದೆಹಲಿಯ ಸದರ್ ಬಜಾರ್‌ನಲ್ಲೂ ಈ ಪ್ರತಿಭಟನೆ ನಡೆಯಲಿದೆ. ದೇಶದಲ್ಲಿ 7 ಕೋಟಿ ವ್ಯಾಪಾರಸ್ಥರು CAIT ಅಡಿ ಬರುತ್ತಾರೆ. ಅವರೆಲ್ಲರೂ ಮಾರ್ಚ್ 19ರಂದು ಚೀನಾ ವಸ್ತುಗಳನ್ನ ಸುಟ್ಟು ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ.
ಚೀನಾ ಗೂಡ್ಸ್‌ಗೆ ಶೇ. 500ರಷ್ಟು ಆಮದು ಸುಂಕ :
ಚೀನಾ ಗೂಡ್ಸ್ ಮೇಲೆ ಆಮದು ಸೇವಾ ಶುಂಕ ಶೇ. 300 ರಿಂದ ಶೇ 500ರಷ್ಟು ಹೆಚ್ಚಿಸಬೇಕು. ಚೀನಾದಿಂದ ಆಮದಾಗುವ ವಸ್ತುಗಳ ಜತೆ ಹವಾಲಾ ವ್ಯವಹಾರ ನಡೆಯುವುದರಿಂದ ಆ ಬಗ್ಗೆ ಕೇಂದ್ರ ಸರ್ಕಾರ ಸಾಕಷ್ಟು ಪರಿಶೀಲನೆ ನಡೆಸಬೇಕು. ಚೀನಾ ಕಚ್ಚಾವಸ್ತುಗಳ ಮೇಲಿನ ಅವಲಂಬನೆ ಕಡಿಮೆ ಮಾಡಬೇಕು. ಸ್ಪರ್ಧಾತ್ಮಕ ಬೆಲೆ ಹೆಚ್ಚಳಕ್ಕಾಗಿ ಸ್ವದೇಶಿ ವಸ್ತುಗಳ ಉತ್ಪಾದನೆ ಹೆಚ್ಚಾಗಬೇಕು. ಅದಕ್ಕಾಗಿ ಸಣ್ಣ ಕೈಗಾರಿಕೆಗಳಿಗೆ ವಿಶೇಷ ಉತ್ತೇಜನವನ್ನ ಕೇಂದ್ರ ಸರ್ಕಾರ ನೀಡಬೇಕು ಅಂತ ಅಖಿಲ ಭಾರತೀಯ ವ್ಯಾಪಾರಸ್ಥರ ಒಕ್ಕೂಟ ಒತ್ತಾಯಿಸಿದೆ.
'ಈಗ ಆಮದಾಗುವ ಎಲ್ಲಾ ಚೀನಾ ವಸ್ತುಗಳಿಂದ ದೇಶದ ಆರ್ಥಿಕ ಬಲ ಹೆಚ್ಚುತ್ತೆ ಅಂತ ಹೇಳಲಾಗುವುದಿಲ್ಲ. ಆಮದು ಹೆಸರಿನಲ್ಲಿ ಹವಾಲಾ ವಹಿವಾಟು ನಡೆದರೆ ಅದ್ಹೇಗೆ ಆರ್ಥಿಕ ಅಭಿವೃದ್ಧಿ ಸಾಧ್ಯ ಹೇಳಿ. ಚೀನಾದ ರಫ್ತುದಾರರಿಗೆ ಉಗ್ರ ಸಂಘಟನೆಗಳಿಂದ ಆರ್ಥಿಕ ನೆರವು ಸಿಗುತ್ತಿದೆ. ಈ ಬಗ್ಗೆಯೂ ಕೇಂದ್ರ ಸರ್ಕಾರ ತನಿಖೆ ನಡೆಸಬೇಕಿದೆ' ಅಂತ CAIT ರಾಷ್ಟ್ರೀಯ ಅಧ್ಯಕ್ಷ ಬಿ.ಸಿ ಭಾರಟಿಯಾ ಹಾಗೂ ಪ್ರ. ಕಾರ್ಯದರ್ಶಿ ಪ್ರವೀಣ್ ಖಂಡೇಲವಾಲಾ ಆಗ್ರಹಿಸಿದ್ದಾರೆ. ಅಷ್ಟೇ ಅಲ್ಲ, ಚೀನಾದಿಂದ ಆಮದಾಗುವ ಗೂಡ್ಸ್ ಬಗೆಗೆ ಒಂದಿಷ್ಟು ಮುಖ್ಯ ಪ್ರಶ್ನೆಗಳನ್ನ ಎತ್ತಿದ್ದಾರೆ.
ಭಾರತ-ಚೀನಾ ಮಧ್ಯೆ ಶೇ.18.63 ವ್ಯಾಪಾರ ವಹಿವಾಟು:
ಚೀನಾ ಉತ್ಪನ್ನಗಳು ದೇಶದೊಳಗೆ ಪ್ರವೇಶಿಸುವ ಮೊದಲೇ ಪರಿಣಾಮಕಾರಿ ಅತ್ಯಾಧುನಿಕ ವ್ಯವಸ್ಥೆ ಬಳಸಿ ಪರಿಶೀಲನೆಗೊಳಪಡಿಸಬೇಕು. ಆ ಬಳಿಕವೇ ಅವು ದೇಶದೊಳಕ್ಕೆ ಪ್ರವೇಶಿಸುವಂತಾಗಬೇಕು. ಇದು ಜಾರಿಯಾದರೆ ಭಾರತೀಯ ಉತ್ಪನ್ನಗಳು ಚೀನಾದ ಗೂಡ್ಸ್ ಜತೆಗೆ ಗುಣಮಟ್ಟದಲ್ಲಿ ಸ್ಪರ್ಧಿಸಬಲ್ಲವು. ಹಾಗೇ ಸ್ಪರ್ಧಾತ್ಮಕ ಬೆಲೆ ಪಡೆಯಬಲ್ಲವು ಅಂತ CAIT ಮುಖ್ಯಸ್ಥರು ಹೇಳುತ್ತಿದ್ದಾರೆ. 2017ರಲ್ಲಿ ಭಾರತ-ಚೀನಾ ಮಧ್ಯೆ ದ್ವಿಪಕ್ಷೀಯ ವ್ಯಾಪಾರ ಒಪ್ಪಂದದ ಬಳಿಕ ವರ್ಷದಿಂದ ವರ್ಷಕ್ಕೆ ಶೇ.18.63 ವ್ಯಾಪಾರ ವೃದ್ಧಿಸಿದೆ.
ಈವರೆಗೂ ಉಭಯ ದೇಶಗಳು 84.44 ಬಿಲಿಯನ್ ಅಮೆರಿಕನ್ ಡಾಲರ್‌ನಷ್ಟು (ಭಾರತೀಯ ರೂಪಾಯಿ ಲೆಕ್ಕದಲ್ಲಿ 58 ಲಕ್ಷದ 23 ಸಾವಿರ ಕೋಟಿ) ವ್ಯಾಪಾರ ಮಾಡಿವೆ. ಇಷ್ಟೊಂದು ಪ್ರಮಾಣದ ವ್ಯವಹಾರವನ್ನ ಇದ್ದಕ್ಕಿದ್ದಂತೆ ಬ್ಯಾನ್ ಮಾಡಲು ಸಾಧ್ಯವೇ, ಅದು ದೇಶದ ವಾಣಿಜ್ಯ ವ್ಯವಹಾರಕ್ಕೆ ಹೊಡೆತ ಕೊಡುವುದಿಲ್ಲವೇ. ಇಂತಹ ಸಂದಿಗ್ದ ಪರಿಸ್ಥಿತಿಯಲ್ಲಿ ಈಗ ಚೀನಾ ಗೂಡ್ಸ್ ಬ್ಯಾನ್ ಮಾಡಲು ಕೇಂದ್ರ ಯಾವ ಕ್ರಮಕೈಗೊಳ್ಳುತ್ತೆ ಅನ್ನೋದನ್ನ ನೋಡಬೇಕು.