ಕಾಂಗ್ಪೋಕ್ಪಿ (ಮಣಿಪುರ): ಕ್ವಾರಂಟೈನ್ ಕೇಂದ್ರದಲ್ಲಿ ಜನಿಸಿದ ಗಂಡು ಮಗುವಿಗೆ ಕ್ವಾರಂಟೈನ್ ಕೇಂದ್ರದ ಹೆಸರಿಟ್ಟ ಅಪರೂಪದ ಘಟನೆ ಮಣಿಪುರದ ಕಾಂಗ್ಪೋಕ್ಪಿ ಜಿಲ್ಲೆಯಲ್ಲಿ ನಡೆದಿದೆ.
ಕ್ವಾರಂಟೈನ್ ಕೇಂದ್ರದಲ್ಲಿ ಮಗು ಜನನ ಸೀಲುಂತಾಂಗ್ ಖೊಂಗ್ಸೈ ಮತ್ತು ನೆಂಗ್ನಿಹತ್ ಖೊಂಗ್ಸೈ ದಂಪತಿ ಮೇ 27ರಂದು ಗೋವಾದಿಂದ ಶ್ರಮಿಕ್ ರೈಲಿನಲ್ಲಿ ತಮ್ಮ ತವರು ರಾಜ್ಯವಾದ ಮಣಿಪುರಕ್ಕೆ ಆಗಮಿಸಿದ್ದರು. ಇದರಿಂದಾಗಿ ಅವರನ್ನು ಕಾಂಗ್ಪೋಕ್ಪಿ ಜಿಲ್ಲೆಯ ಹೈಪಿ ಗ್ರಾಮದ ಇಮ್ಯಾನುಯಲ್ ಶಾಲೆಯಲ್ಲಿ ಸರ್ಕಾರಿ ಕ್ವಾರಂಟೈನ್ನಲ್ಲಿ ಇಡಲಾಗಿತ್ತು.
ಈ ದಂಪತಿಗೆ ಮೇ 31 ಬೆಳಗ್ಗೆ 9.45ಕ್ಕೆ ಮಗುವೊಂದು ಜನಿಸಿತ್ತು. ಆರೋಗ್ಯಾಧಿಕಾರಿಗಳಾದ ಡಾ.ತಾಂಗ್ಮಿನ್ಲುನ್ ಹಾಗೂ ಡಾ.ನೆಂಗ್ಪಿಲ್ಹಿಂಗ್ ಮಿಸಾವೋ ಹೆರಿಗೆ ಮಾಡಿಸಿದ್ದರು. ಇಮ್ಯಾನುಯೆಲ್ ಕ್ವಾರಂಟೈನ್ ಕೇಂದ್ರದಲ್ಲಿ ಮಗು ಜನಿಸಿದ ಕಾರಣದಿಂದ ಇಮ್ಯಾನುಯೆಲ್ ಕ್ವಾರಂಟೀನೋ ಎಂದು ಮಗುವಿಗೆ ನಾಮಕರಣ ಮಾಡಲಾಗಿದೆ.
ತಾಯಿ ಹಾಗೂ ಮಗುವಿಗೆ ಕೋವಿಡ್-19 ಸೋಂಕು ಪರೀಕ್ಷೆ ಮಾಡಲಾಗಿದ್ದು, ಇಬ್ಬರ ಫಲಿತಾಂಶವೂ ನೆಗೆಟಿವ್ ಬಂದಿದೆ ಎಂದು ಡಾ. ಮಿಸಾವೋ ಸ್ಪಷ್ಟಪಡಿಸಿದ್ದಾರೆ. ಈಗ ದಂಪತಿ ಹಾಗೂ ಮಗುವನ್ನು ಮತ್ತಷ್ಟು ದಿನಗಳ ಕ್ವಾರಂಟೈನ್ಗಾಗಿ ಚೋಂಗ್ಲಾಂಗ್ ಸಾಮುದಾಯಿಕ ಕೇಂದ್ರಕ್ಕೆ ಕಳುಹಿಸಲಾಗಿದೆ.