ಕೋಲ್ಕತ್ತಾ: ಸಿಬಿಐ ಅಧಿಕಾರಿ ಎಂದು ಐವರು ಬೇರೆ ರಾಜ್ಯದ ಸಿಎಂ ಸಹೋದರನನ್ನೇ ಕಿಡ್ನಾಪ್ ಮಾಡಿರುವ ಘಟನೆ ನಗರದಲ್ಲಿ ನಡೆದಿದೆ.
ಮಣಿಪುರ್ ರಾಜ್ಯದ ಸಿಎಂ ಬೀರೇನ್ ಸಿಂಗ್ ಸಹೋದರ ಟೊಂಗ್ಬ್ರಾಮ್ ಲುಖೋಯ್ ಸಿಂಗ್ ಕೋಲ್ಕತ್ತಾದಲ್ಲಿ ವಾಸಿಸುತ್ತಿದ್ದಾರೆ. ಶುಕ್ರವಾರ ಐವರು ಅಪರಿಚಿತರು ಸಿಬಿಐ ಅಧಿಕಾರಿ ಅಂತಾ ಹೇಳಿ ಮನೆಗೆ ನುಗ್ಗಿದ್ದರು. ಬಳಿಕ ಮೂರು ನಕಲಿ ಪಿಸ್ತೂಲ್ನಿಂದ ಹೆದರಿಸಿ ಕಿಡ್ನಾಪ್ ಮಾಡಿ, ಲುಖೋಯ್ ಸಿಂಗ್ ಅವರ ಪತ್ನಿಗೆ ಫೋನ್ ಮಾಡಿ 15 ಲಕ್ಷ ರೂ. ಡಿಮ್ಯಾಂಡ್ ಮಾಡಿದ್ದರು.
ಇನ್ನು ಲಖೋಯ್ ಸಿಂಗ್ ಪತ್ನಿ ಈ ಸಮಾಚಾರವನ್ನು ಪೊಲೀಸರಿಗೆ ತಿಳಿಸಿದ್ದರು. ಮಾಹಿತಿ ಪಡೆದ ಪೊಲೀಸರು ಕೇವಲ ಒಂದೇ ಗಂಟೆಯಲ್ಲೇ ಪ್ರಕರಣ ಛೇದಿಸಿದ್ದಾರೆ. ಸೆಂಟ್ರಲ್ ಕೋಲ್ಕತ್ತಾದ ಬೆನಿಯಾಪುರ್ ಪ್ರದೇಶದಲ್ಲಿ ಬಂಧನದಲ್ಲಿದ್ದ ಲುಖೋಯ್ ಸಿಂಗ್ರನ್ನು ರಕ್ಷಿಸಿದ್ದಾರೆ.
ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದು, ಆರೋಪಿಗಳಿಂದ ನಕಲಿ ಪಿಸ್ತೂಲ್ಗಳು, ಎರಡು ವಾಹನಗಳು ಮತ್ತು 2 ಲಕ್ಷ ನಗದು ವಶಕ್ಕೆ ಪಡೆದುಕೊಂಡಿದ್ದಾರೆ. ಸುಲಭವಾಗಿ ಹಣ ಸಂಪಾದಿಸುವ ಉದ್ದೇಶದಿಂದಾಗಿ ಕಿಡ್ನಾಪ್ ಮಾಡಿರುವುದಾಗಿ ಆರೋಪಿಗಳು ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾರೆ. ಮಣಿಪುರ್ಗೆ ನಿವಾಸಿಯೊಬ್ಬ ಈ ಘಟನೆಯ ಸೂತ್ರಧಾರಿಯೆಂದು ತಿಳಿದು ಬಂದಿದೆ.