ಲಖ್ನೋ (ಉತ್ತರ ಪ್ರದೇಶ):ಕೋವಿಡ್ -19 ಸೋಂಕಿನಿಂದ ದೇಶಾದ್ಯಂತ ಲಾಕ್‌ಡೌನ್ ಘೋಷಣೆಯಾದ ಕಾರಣದಿಂದ ಮಾವು ಬೆಳೆಗಾರರು ಈ ಋತುವಿನಲ್ಲಿ ಭಾರಿ ನಷ್ಟವನ್ನು ಅನುಭವಿಸಲಿದ್ದಾರೆ. ಈ ಬಾರಿ ಶೇ 100ರಷ್ಟು ನಷ್ಟ ಅನುಭವಿಸುವ ಸಾಧ್ಯತೆ ಇದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
''ಲಾಕ್ಡೌನ್ನಿಂದಾಗಿ ಉತ್ತರ ಪ್ರದೇಶ, ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶ ಸೇರಿದಂತೆ ಪ್ರಮುಖ ಮಾವು ಉತ್ಪಾದಿಸುವ ರಾಜ್ಯಗಳಲ್ಲಿ ಮಾವು ಬೆಳೆಗಾರರ ಸ್ಥಿತಿ ಕಠೋರವಾಗಿರಲಿದೆ'' ಎಂದು ಮಾವಿನ ಬೆಳೆಗಾರರ ಸಂಘದ ಅಧ್ಯಕ್ಷ ರಾಷ್ಟ್ರೀಯ ಅಧ್ಯಕ್ಷ ಇನ್ಸ್ರಾಮ್ ಅಲಿ ಅಭಿಪ್ರಾಯಪಟ್ಟಿದ್ದಾರೆ.
ಈ ಋತುವಿನಲ್ಲಿ ಮಾರುಕಟ್ಟೆ ಕಡಿಮೆಯಾಗೋದು ಮಾತ್ರವಲ್ಲದೇ, ಉತ್ತರ ಭಾರತದಲ್ಲಿ ಅಕಾಲಿಕ ಮಳೆಯ ಕಾರಣಕ್ಕೆ ಉತ್ಪಾದನೆಯೂ ಕೂಡಾ ಕಳೆದ ವರ್ಷಕ್ಕಿಂತ ಶೇ 30ರಷ್ಟು ಕಡಿಮೆಯಾಗಲಿದೆ ಎಂದು ಅವರು ಭವಿಷ್ಯ ನುಡಿದಿದ್ದಾರೆ.
''ಮಹಾರಾಷ್ಟ್ರದಲ್ಲಿ ಅಲ್ಫೋನ್ಸೊ ಮಾವಿನ ಹಣ್ಣಿನ ಬೆಲೆ ಈ ವರ್ಷ ಅರ್ಧಕ್ಕಿಂತಲೂ ಕಡಿಮೆಯಾಗಿದೆ. ಕಳೆದ ವರ್ಷ ಪ್ರತಿ ಡಜನ್‌ಗೆ 1,500 ರೂ.ಗಳಷ್ಟಿತ್ತು, ಆದರೆ ಈ ವರ್ಷ ಪ್ರತಿ ಡಜನ್‌ಗೆ 400-500ರೂ.ಗಳಷ್ಟಿದೆ. ಮಧ್ಯಪ್ರಾಚ್ಯ ದೇಶಗಳು ಮತ್ತು ಯುರೋಪಿಗೆ ಮಾವಿನ ರಫ್ತು ಸ್ಥಗಿತಗೊಂಡಿದ್ದು, ಮಾವಿನ ಬೆಲೆ ಏರಿಕೆಯಾಗುವ ಯಾವುದೇ ಸೂಚನೆ ಇಲ್ಲ'' ಎಂದು ಮಾವು ಮಾರುಕಟ್ಟೆಯ ಕರಾಳತೆಯನ್ನು ಬಿಚ್ಚಿಟ್ಟಿದ್ದಾರೆ.
ದೇಶವು ಕಳೆದ ವರ್ಷ ಸುಮಾರು 1 ಕೋಟಿ 75 ಲಕ್ಷ ಮೆಟ್ರಿಕ್ ಟನ್ ಮಾವು ಉತ್ಪಾದಿಸಿತ್ತು. ಈ ವರ್ಷ 1 ಕೋಟಿ ಮೆಟ್ರಿಕ್ ಟನ್ ಮಾವು ಉತ್ಪಾದನೆಯಾಗುವ ಸಾಧ್ಯತೆಯಿದೆ ಅದರಲ್ಲೂ ಮುಖ್ಯವಾಗಿ ಉತ್ತರ ಭಾರತದಲ್ಲಿ ವಿಶೇಷವಾಗಿ ಉತ್ತರ ಪ್ರದೇಶದಲ್ಲಿ ಅಕಾಲಿಕ ಮಳೆ ಮತ್ತು ಆಲಿಕಲ್ಲು ಮಳೆಯಿಂದಾಗಿ ಇಳುವರಿ ಕಡಿಮೆಯಾಗಲಿದೆ ಎಂದು ಅಭಿಪ್ರಾಯಪಡಲಾಗಿದೆ. ಇದರಿಂದಾಗಿ ಸುಮಾರು 6 ಸಾವಿರ ಕೋಟಿ ರೂಪಾಯಿ ನಷ್ಟವಾಗಲಿದೆ ಎಂದು ಅಂದಾಜಿಸಲಾಗಿದೆ.