ಲೋಹರ್‌ದಗ (ಜಾರ್ಖಂಡ್):ಗಂಡು ಮಗುವಿನ ಆಸೆಯಲ್ಲಿ ತನ್ನ ಮಗಳನ್ನೇ ಕೊಲೆಗೈದ ಘಟನೆ ಲೋಹರ್‌ದಗದಲ್ಲಿ ನಡೆದಿದೆ. ಮಂತ್ರವಾದಿಯ ಸಲಹೆ ಪಡೆದ ವ್ಯಕ್ತಿವೋರ್ವ ತನ್ನ ಆರು ವರ್ಷದ ಮಗಳನ್ನು ಕೊಡಲಿಯಿಂದ ಕೊಚ್ಚಿ ಕೊಂದಿದ್ದಾನೆ ಎಂಬ ಆರೋಪ ಕೇಳಿಬಂದಿದೆ.
ಈ ಪ್ರಕರಣ ಸಂಬಂಧ ಪೊಲೀಸರು ಆರೋಪಿ ಸುಮನ್ ನಾಗೇಶಿಯಾನನ್ನು ಬಂಧಿಸಿ ಬಾಲಕಿ ಸುಷ್ಮಾಳನ್ನು ಕೊಲೆ ಮಾಡಲು ಬಳಸಿದ ಕೊಡಲಿಯನ್ನು ವಶಪಡಿಸಿಕೊಂಡಿದ್ದಾರೆ.
ಪೊಲೀಸರ ಪ್ರಕಾರ, ಜಾರ್ಖಂಡ್‌ನ ಲೋಹರ್‌ದಗ ಜಿಲ್ಲೆಯ ಬೊಂಡೊಬಾರ್ ಗ್ರಾಮದ ಸುಮನ್ ನಾಗೇಶಿಯಾ ಗ್ರಾಮದ ಬಳಿಯಿದ್ದ ಮಾಂತ್ರಿಕನೋರ್ವನನ್ನು ಭೇಟಿಯಾಗಿ, ತನಗೆ ಗಂಡುಮಗುವಿಲ್ಲದ ವಿಚಾರವನ್ನು ತಿಳಿಸಿದ್ದಾನೆ. ಪುತ್ರಸಂತಾನಕ್ಕಾಗಿ ಸಲಹೆ ಕೇಳಿದ್ದಾನೆ. ಅದಕ್ಕೆ ಮಂತ್ರವಾದಿ, ಮಗನನ್ನು ಪಡೆಯುವ ಸಲುವಾಗಿ ದೀಪಾವಳಿಯ ಸಂದರ್ಭದಲ್ಲಿ ನಿನ್ನ ಮಗಳನ್ನು ಕೊಲ್ಲಬೇಕೆಂದು ಸಲಹೆ ನೀಡಿದ್ದಾನೆ.
ತನ್ನ 6 ವರ್ಷದ ಮಗಳನ್ನು ಕೊಲ್ಲಲು ಅವಕಾಶಕ್ಕಾಗಿ ಆರೋಪಿ ಸುಮನ್ ನಾಗೇಶಿಯಾ ಬಹು ದಿನಗಳಿಂದ ಕಾಯುತ್ತಿದ್ದ. ಬಳಿಕ ಕೊಡಲಿಯಿಂದ ಪುತ್ರಿ ಸುಷ್ಮಾಳ ಕುತ್ತಿಗೆಗೆ ಇರಿದು ಕೊಂದಿದ್ದಾನೆ. ಘಟನೆ ಬಗ್ಗೆ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದು, ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸದ್ಯ ಬಾಲಕಿಯ ಶವವನ್ನು ಮರಣೋತ್ತರ ಪರೀಕ್ಷೆಗೆಂದು ಸದರ್ ಆಸ್ಪತ್ರೆಗೆ ಕಳುಹಿಸಲಾಗಿದೆ. ಈ ಕಟುಕ ಕೆಲಸಕ್ಕೆ ಸಲಹೆ ನೀಡಿದ್ದ ಮಂತ್ರವಾದಿಯನ್ನು ಬಂಧಿಸಲು ಪೊಲೀಸರು ಶೋಧ ಕಾರ್ಯ ಕೈಗೊಂಡಿದ್ದಾರೆ.