ಸಂಭಾಲ್ (ಉತ್ತರ ಪ್ರದೇಶ): "ನಾನು ಸಂಭಾಲ್ ಪೊಲೀಸರಿಗೆ ಹೆದರುತ್ತೇನೆ. ನನ್ನ ತಪ್ಪುಗಳನ್ನು ಒಪ್ಪಿಕೊಳ್ಳುತ್ತೇನೆ. ನಾನು ಶರಣಾಗುತ್ತಿದ್ದೇನೆ, ದಯವಿಟ್ಟು ನನಗೆ ಗುಂಡು ಹಾರಿಸಬೇಡಿ" ಎಂದು ಬರೆದಿದ್ದ ಫಲಕವನ್ನು ಕುತ್ತಿಗೆಗೆ ಹಾಕಿಕೊಂಡು ವ್ಯಕ್ತಿವೋರ್ವ ಉತ್ತರ ಪ್ರದೇಶದ ಪೊಲೀಸ್ ಠಾಣೆಯೊಂದಕ್ಕೆ ಬಂದು ಶರಣಾಗಿದ್ದಾನೆ.
ನಖಾಸಾ ಪೊಲೀಸ್ ಠಾಣೆಯಲ್ಲಿ ಈ ಘಟನೆ ಸಂಭವಿಸಿದ್ದು, ಶರಣಾದ ವ್ಯಕ್ತಿಯನ್ನು ರೌಡಿ ಶೀಟರ್ ನಯೀಮ್ ಎಂದು ಗುರುತಿಸಲಾಗಿದೆ. ಎನ್‌ಕೌಂಟರ್‌ನಲ್ಲಿ ಅವನನ್ನು ಗುಂಡಿಕ್ಕಿ ಕೊಂದಿಲ್ಲವೆಂದು ಖಚಿತಪಡಿಸಲು ಅವನು ಫಲಕ ಹಾಕಿಕೊಂಡು ಪೊಲೀಸ್ ಠಾಣೆಗೆ ಬಂದಿದ್ದಾನೆ. ಉತ್ತರ ಪ್ರದೇಶದಲ್ಲಿ ದರೋಡೆಕೋರ ಮತ್ತು ಸಮಾಜ ವಿರೋಧಿ ಚಟುವಟಿಕೆ ತಡೆ ಕಾಯ್ದೆಯಡಿ ಈತನ ವಿರುದ್ಧ ಪ್ರಕರಣ ದಾಖಲಾಗಿತ್ತು. ಸುಳಿವು ನೀಡಿದವರಿಗೆ 15,000 ರೂ. ಬಹುಮಾನ ಕೂಡಾ ಘೋಷಿಸಲಾಗಿತ್ತು.