ಕಾಸರಗೋಡು: ಪತ್ನಿಯನ್ನು ಗುಂಡಿಕ್ಕಿ ಕೊಂದ ಪತಿಯೂ ಬಳಿಕ ಆತ್ಮಹತ್ಯೆ ಮಾಡಿಕೊಂಡ ಘಟನೆ ಕಾಸರಗೋಡು ಜಿಲ್ಲೆಯ ಕನತೂರಿನಲ್ಲಿ ನಡೆದಿದೆ.
ಕನತೂರಿನ ವಡಕ್ಕೇಕ್ಕರ ಮೂಲದ ವಿಜಯನ್ ತನ್ನ ಪತ್ನಿ ಬೇಬಿಯನ್ನು ಶನಿವಾರ ಮಧ್ಯಾಹ್ನದಂದು ತನ್ನ ಮನೆಯಲ್ಲಿ 5 ವರ್ಷದ ಪುತ್ರನ ಎದುರೇ ಗುಂಡಿಕ್ಕಿ ಕೊಂದಿದ್ದಾನೆ. ಅಷ್ಟೇ ಅಲ್ಲದೆ, ಕೃತ್ಯದ ಬಳಿಕ ವಿಜಯನ್ ಕೂಡ ನೇಣಿಗೆ ಶರಣಾಗಿದ್ದಾನೆ. ಇದನ್ನು ನೋಡಿದ ಅವರ ಪುತ್ರ, ನೆರೆಹೊರೆಯ ಮನೆಯವರಿಗೆ ನಡೆದ ಘಟನೆ ಬಗ್ಗೆ ತಿಳಿಸಿದ ನಂತರ ವಿಷಯ ಬೆಳಕಿಗೆ ಬಂದಿದೆ.
ಈ ಸುದ್ದಿಯನ್ನೂ ಓದಿ:ಲಿವ್-ಇನ್-ರಿಲೇಷನ್ನಲ್ಲಿದ್ದ ಜೋಡಿ ಮೇಲೆ ಗುಂಡಿನ ದಾಳಿ!
ಪತ್ನಿಯನ್ನು ಕೊಂದ ವಿಜಯನ್ ಅಲ್ಲೇ ಹತ್ತಿರದಲ್ಲಿದ್ದ ತಮ್ಮ ರಬ್ಬರ್ ತೋಟಕ್ಕೆ ತೆರಳಿ, ರಬ್ಬರ್ ಮರಕ್ಕೆ ಬಳಸಿದ್ದ ಪಂಚೆ ಬಳಸಿ ನೇಣು ಬಿಗಿದುಕೊಂಡಿದ್ದಾರೆ. ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಮೃತದೇಹದ ಬಳಿಯಿಂದ ಕೃತ್ಯಕ್ಕೆ ಬಳಸಿದ ಬಂದೂಕನ್ನು ವಶಕ್ಕೆ ಪಡೆಯಲಾಗಿದೆ.
ಕೌಟುಂಬಿಕ ಕಲಹ ಕೊಲೆ ಮತ್ತು ಆತ್ಮಹತ್ಯೆಗೆ ಕಾರಣವಾಗಿರಬಹುದೆಂದು ಸ್ಥಳೀಯರು ಅಂದಾಜಿಸಿದ್ದಾರೆ. ಇನ್ನೂ ಪೊಲೀಸ್ ವಿಚಾರಣೆಯ ನಂತರ, ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.