ಹೈದರಾಬಾದ್:ಸಿಕಂದ್ರಾಬಾದ್ ರೈಲ್ವೆ ನಿಲ್ದಾಣದಲ್ಲಿ ಸಿಗರೇಟ್, ತಂಬಾಕು ಉತ್ಪನ್ನ, ಸಿಹಿ ತಿನಿಸುಗಳನ್ನು ಮಾರಾಟ ಮಾಡುತ್ತಲೇ ಪ್ರಯಾಣಿಕರ ಜೇಬುಗಳಿಗೆ ಕತ್ತರಿ ಹಾಕುತ್ತಿದ್ದ ವ್ಯಕ್ತಿಯೊಬ್ಬನನ್ನು ಸಿಕಂದ್ರಾಬಾದ್ ಪೊಲೀಸರು ಬಂಧಿಸಿದ್ದಾರೆ. ಬರೀ ಇಷ್ಟು ಮಾಡಿದ್ದಿದ್ದರೆ ಈತ ದೊಡ್ಡ ಮಟ್ಟದಲ್ಲಿ ಸುದ್ದಿಯಾಗುತ್ತಿರಲಿಲ್ಲ ಅನ್ಸುತ್ತೆ. ಆದ್ರೆ, ಆತನ ಮನೆಯ ಬಾಡಿಗೆ, ಐಷಾರಾಮಿ ಜೀವನ, ಮಕ್ಕಳು ಓದುತ್ತಿರುವ ಶಾಲೆ, ಶಾಲಾ ಪ್ರವೇಶ ಶುಲ್ಕ ಕೇಳಿದರೆ ದಂಗಾಗೋದು ಗ್ಯಾರಂಟಿ! ಹೀಗಿದೆ ನೋಡಿ ಈ ಕಳ್ಳನ ಅಸಲಿಯತ್ತು.
ಆತನ ನಾಮದೇಯ ತಾನೇದಾರ್ ಸಿಂಗ್ ಕುಶವ. 2004ರಲ್ಲೇ ಉತ್ತರ ಪ್ರದೇಶದ ಆಲಿಗರ್ನಿಂದ ಬದುಕು ಕಟ್ಟಿಕೊಳ್ಳಲು ಇಲ್ಲಿಗೆ ಬಂದಿದ್ದ. ಇಲ್ಲಿನ ಸಿಕಂದ್ರಾಬಾದ್ ರೈಲ್ವೆ ನಿಲ್ದಾಣದಲ್ಲಿ ಸಿಗರೇಟ್, ತಂಬಾಕು, ಸಿಹಿ ತಿನಿಸುಗಳನ್ನು ಮಾರಾಟ ಮಾಡಿಕೊಂಡು ಜೀವನ ನಡೆಸುತ್ತಿದ್ದ. ಈ ಎಲ್ಲಾ ಸಾಮಗ್ರಿಗಳನ್ನು ಸ್ನೇಹಿತ ರಾಮ್ ಸ್ವರೂಪ್ ಒದಗಿಸುತ್ತಿದ್ದ. ಆದರೆ, ಈತ ವ್ಯಾಪಾರದ ಸೋಗಿನಲ್ಲಿ ಮಾಡುತ್ತಿದ್ದದ್ದೇ ಬೇರೆ ಕೆಲಸ.
ಅಂದಿನಿಂದ (2004-2019) ಪ್ರಸ್ತುತ ಆರೋಪಿ ಮೇಲೆ 400 ಪಿಕ್ಪಾಕೆಟಿಂಗ್ ಅಪರಾಧ ಹಾಗೂ ಕಳ್ಳತನ ಪ್ರಕರಣಗಳಿವೆ. ಕಳ್ಳತನ ಮಾಡಿದ ನಗದು, ಕದ್ದ ವಸ್ತುಗಳ ಒಟ್ಟು ಮೌಲ್ಯ ಬರೋಬ್ಬರಿ ₹ 2 ಕೋಟಿಗೂ ಹೆಚ್ಚಿದೆ. ಆದರೂ ಸಾಮಾನ್ಯ ವ್ಯಕ್ತಿಯಂತೆ ನೆಲೆಸಿದ್ದ.
ಹೀಗೆ ಕಳ್ಳತನ ಮಾಡುತ್ತಿದ್ದ:
ಪ್ರಯಾಣಿಕರ ಕಿಸೆಗೆ ಕತ್ತರಿ ಹಾಕಲು ನಿತ್ಯ ಹರಿತವಾದ ಬ್ಲೇಡ್ಗಳನ್ನು ಹೊಂದಿರುತ್ತಿದ್ದ. ಆತನ ಬಳಿ ಖರೀದಿಸಿದ ಪ್ರಯಾಣಿಕನ ಪರ್ಸ್ನಲ್ಲಿ ಹಣ ಇದ್ದದ್ದನ್ನು ಖಚಿತ ಪಡಿಸಿಕೊಂಡು, ಆತನ ನಿಗಾ ಮೇಲೆ ಇಡುತ್ತಿದ್ದ. ಆ ಪ್ರಯಾಣಿಕರ ಚಲನವನಗಳನ್ನು ಗಮನಿಸಿ ಆತನನ್ನೇ ಅನುಸರಿಸುತ್ತಿದ್ದ. ಬಳಿಕ ಗಮನ ಬೇರೆಡೆ ಸೆಳೆದು ಬ್ಲೇಡ್ನಿಂದ ಕಿಸೆಗೆ ಕತ್ತರಿ ಹಾಕಿ ಪರಾರಿಯಾಗುತ್ತಿದ್ದ. ಸಿಕಂದ್ರಾಬಾದ್-ಪುಣೆ ರೈಲಿನ ಪ್ರಯಾಣಿಕರ ಪರ್ಸ್ಗಳನ್ನೇ ಹೆಚ್ಚಾಗಿ ಕದ್ದಿದ್ದಾನೆ ಎಂದು ಸಿಕಂದ್ರಾಬಾದ್ ರೈಲ್ವೆ ಪೊಲೀಸ್ ವರಿಷ್ಠಾಧಿಕಾರಿ ಬಿ.ಅನುರಾಧಾ ತಿಳಿಸಿದರು.
ಸಿಕಂದ್ರಾಬಾದ್ ರೈಲ್ವೆ ಪೊಲೀಸ್ ವರಿಷ್ಠಾಧಿಕಾರಿ ಬಿ.ಅನುರಾಧಾ ಮನೆ ಬಾಡಿಗೆ ಓದಿ:ಇಲ್ಲಿ ಕದ್ದ ಹಣದಲ್ಲಿ ಸ್ವಲ್ಪ ತನ್ನ ತಂದೆಗೆ ಕಳುಹಿಸಿಕೊಡುತ್ತಿದ್ದ. ಜೂಜುಕೋರರನ್ನು ಪರಿಚಯಿಸಿಕೊಂಡು ಅವರೊಂದಿಗೆ ಜೂಜಾಡುತ್ತಿದ್ದ. ಕುಶವ ಮದುವೆ ಆಗುವುದಕ್ಕೂ ಮುನ್ನ 75ಕ್ಕೂ (2009-10ರಲ್ಲಿ) ಹೆಚ್ಚು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ. ಒಟ್ಟು ₹ 13 ಲಕ್ಷ ನಗದು ಸಂಪಾದಿಸಿ, 400 ಚದರ ಗಜಗಳಷ್ಟು ಜಮೀನು ಖರೀದಿಸಿ ಮದುವೆಯಾದ. ಆರೋಪಿ ಮನೆ ಬಾಡಿಗೆ ಬರೋಬ್ಬರಿ ₹ 30,000 ಹಾಗೂ ಇಬ್ಬರನ್ನು ಮಕ್ಕಳನ್ನು ಅಂತಾರಾಷ್ಟ್ರೀಯ ಶಾಲೆಯಲ್ಲಿ ಓದಿಸುತ್ತಿದ್ದು, ಈ ಇಬ್ಬರಿಗೂ ವಾರ್ಷಿಕ ₹ 8 ಲಕ್ಷ ಶಾಲಾ ಶುಲ್ಕ ಪಾವತಿಸುತ್ತಾನೆ.
ಇಷ್ಟೆಲ್ಲಾ ಆದ ಬಳಿಕ ಕ್ರಿಕೆಟ್ ಬೆಟ್ಟಿಂಗ್ ದಂಧೆಗಿಳಿದ. ಬುಕ್ಗಳಿಂದ ₹ 10 ಲಕ್ಷ ಗೆದ್ದ. ಈ ಮೂಲಕ ಆಗ್ರಾದಲ್ಲಿ ಎರಡು ಮಳಿಗೆ, ಎರಡು ಬೆಡ್ರೂಮ್ ಒಳಗೊಂಡ ಪ್ಲಾಟ್ಅನ್ನು ಹೆಂಡತಿ ಹೆಸರಲ್ಲಿ ಖರೀದಿಸಿದ. ಕಳ್ಳತನ ಪ್ರಕರಣದಲ್ಲೇ 2011ರಲ್ಲಿ ಸೋಲಾಪುರ್ ರೈಲ್ವೆ ಪೊಲೀಸರು ಬಂಧಿಸಿ, ಒಂದು ವರ್ಷ ಯಾರ್ವಾಡ ಜೈಲಿನಲ್ಲಿರಿಸಿದರು. ಜೈಲಿನಿಂದ ಬಿಡುಗಡೆಯಾದ ನಂತರ, ಅವರು ತಮ್ಮ ಕುಟುಂಬವನ್ನು ಸೆರಿಲಿಂಗಂಪಲ್ಲಿಗೆ ಸ್ಥಳಾಂತರಿಸಿ ಬಾಡಿಗೆ ಮನೆಯಲ್ಲಿದ್ದರು.
ನವೆಂಬರ್ನಲ್ಲಿ ಅವರು ಬೇಗಂಪೇಟ್ ರೈಲ್ವೆ ನಿಲ್ದಾಣದಲ್ಲಿ ಪೊಲೀಸ್ ಪೇದೆಯೊಬ್ಬರ ಮೇಲೆ ಬ್ಲೇಡ್ನಿಂದ ಹಲ್ಲೆ ನಡೆಸಿದ್ದರು. ಅಂದು ತಪ್ಪಿಸಿಕೊಂಡಿದ್ದ ಕಳ್ಳ, ಅದೇ ತಿಂಗಳಲ್ಲಿ ತಾನು ನಿಲ್ಲಿಸಿದ್ದ ಬೈಕ್ ಸಂಗ್ರಹಿಸಲು ಬಂದಾಗ ರೈಲ್ವೆ ನಿಲ್ದಾಣಕ್ಕೆ ಬಂದಾಗ ಪೊಲೀಸರು ಬಂಧಿಸಿದರು. ಕುಶ್ವಾನಿಂದ 668.09 ಗ್ರಾಂ. ಚಿನ್ನ ಮತ್ತು ₹ 13.53 ಲಕ್ಷ ನಗದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಮೊದಲು ಮಾಡಿದ್ದ ಕಳ್ಳತನ ಪ್ರಕರಣಗಳು ಮತ್ತು ಆತ ಬದುಕಿದ ಜೀವನದ ರೀತಿಯನ್ನು ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾನೆ.