ಕೋಲ್ಕತ್ತಾ: ಪ್ರತಿಯೊಂದು ಸಂದರ್ಭದಲ್ಲೂ ಚಾಯ್ವಾಲಾನನ್ನು ಹಳಿಯುತ್ತಾ ಬರುತ್ತಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಚಹಾ ತಯಾರಿಸಿ ಎಲ್ಲರ ಅಚ್ಚರಿಗೆ ಕಾರಣರಾಗಿದ್ದಾರೆ.
ರಾಜ್ಯ ಪ್ರವಾಸ ಮಾಡುವ ಸಂದರ್ಭದಲ್ಲಿ ಸಿಎಂ ಮಮತಾ ಬ್ಯಾನರ್ಜಿ ದಿಘಾ ಹೆಸರಿನ ಊರಿನಲ್ಲಿ ಕಾರು ನಿಲ್ಲಿಸುವಂತೆ ಹೇಳಿ ನೇರವಾಗಿ ಅಲ್ಲೇ ಪಕ್ಕದಲ್ಲಿದ್ದ ಚಹಾ ಅಂಗಡಿಗೆ ತೆರಳಿದ್ದಾರೆ.
ಸಿಎಂ ದಿಢೀರ್ ಕಾರಿನಿಂದ ಇಳಿದ ಪರಿಣಾಮ ಭದ್ರತಾ ಸಿಬ್ಬಂದಿ ಅರೆಕ್ಷಣ ಗಲಿಬಿಲಿಗೊಂಡಿದ್ದರು. ಟೀ ಶಾಪ್ಗೆ ತೆರಳಿದ ಸಿಎಂ ಅಂಗಡಿ ಯಜಮಾನನ ಬಳಿ ಅನುಮತಿ ಪಡೆದು ಅಲ್ಲಿದ್ದ ಗ್ರಾಹಕರಿಗೆ ತಾವೇ ಟೀ ತಯಾರಿಸಿ ನೀಡಿದ್ದಾರೆ.
ಮಮತಾ ಬ್ಯಾನರ್ಜಿಯ ಈ ನಡೆ ಅಚ್ಚರಿ ತರಿಸಿದೆ. ಇನ್ನು ಈ ವೇಳೆ ಟಿಎಂಸಿ ನಾಯಕರಾದ ಸುವೇಂದು ಅಧಿಖಾರಿ ಹಾಗೂ ಸುಬ್ರತಾ ಮುಖರ್ಜಿ ಜೊತೆಯಲ್ಲಿದ್ದರು. ಸಿಎಂ ಮಮತಾ ಬ್ಯಾನರ್ಜಿ ಟೀ ಶಾಪ್ ಬಳಿ ಇರುವ ವಿಚಾರ ತಿಳಿಯುತ್ತಿದ್ದಂತೆ ದೊಡ್ಡ ಸಂಖ್ಯೆಯಲ್ಲಿ ಜನ ಸೇರಿದ್ದರು.
"ಕೆಲವೊಂದು ಸಂದರ್ಭದಲ್ಲಿ ಸಣ್ಣಪುಟ್ಟ ಖುಷಿಗಳು ಬದುಕನ್ನು ಮತ್ತಷ್ಟು ಸುಂದರವಾಗಿಸುತ್ತವೆ. ಟೀ ತಯಾರಿಸಿ ಗ್ರಾಹಕರಿಗೆ ನೀಡುವ ಸಣ್ಣ ಪ್ರಕ್ರಿಯೆ ದೊಡ್ಡ ಖುಷಿಗೆ ಕಾರಣ" ಎಂದು ಮಮತಾ ಬ್ಯಾನರ್ಜಿ ಟ್ವೀಟ್ ಮಾಡಿದ್ದಾರೆ.