ಕಲಬುರಗಿ: ಲೋಕಸಭಾ ಚುನಾವಣೆಗೂ ಮುನ್ನ ರಾಜ್ಯ ಸಮ್ಮಿಶ್ರ ಸರ್ಕಾರವನ್ನು ಬೀಳಿಸಿ ತಮ್ಮ ಸರ್ಕಾರ ರಚಿಸಲು ಶತಪ್ರಯತ್ನ ಮಾಡುವ ಮೂಲಕ ಬಿಜೆಪಿಯವರು ತಮ್ಮ ಹಳೇ ಚಾಳಿ ಮುಂದುವರೆಸಿದ್ದಾರೆಂದು ಕಾಂಗ್ರೆಸ್ ಲೋಕಸಭೆ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಈ ಮುಂಚೆ ಹರಿಯಾಣ, ಉತ್ತರಾಖಂಡ್, ಗೋವಾ ಹಾಗೂ ಮಣಿಪುರ ರಾಜ್ಯಗಳಲ್ಲಿ ಮಾಡಿದಂತೆ ರಾಜ್ಯದಲ್ಲಿನ ಮೈತ್ರಿ ಸರ್ಕಾರ ಬೀಳಿಸಿ ಚುನಾವಣೆಗೂ ಮುನ್ನ ತಮ್ಮ ಸರ್ಕಾರ ರಚಿಸಲು ಬಿಜೆಪಿ ನಾಯಕರು ಇನ್ನಿಲ್ಲದ ಕಸರತ್ತು ಮಾಡುತ್ತಿದ್ದಾರೆ. ರಾಜ್ಯ ನಾಯಕರಲ್ಲದೆ ಪ್ರಧಾನಿ ಮೋದಿ, ಅಮಿತ್ ಶಾ ಸೇರಿ ಎಲ್ಲರೂ ಒಟ್ಟಾಗಿ ಸರ್ಕಾರ ಉರುಳಿಸುವ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು.
ಪ್ರಜಾಪ್ರಭುತ್ವದಲ್ಲಿ ಆಯ್ಕೆಯಾದ ಸರ್ಕಾರವನ್ನು ಬೀಳಿಸಿ ತಮ್ಮ ಸರ್ಕಾರ ತರುವ ಹಳೇ ಚಾಳಿ ಬಿಜೆಪಿ ಬಿಟ್ಟಿಲ್ಲ ಎಂದು ಬಿಜೆಪಿ ನಾಯಕರಿಗೆ ಟಾಂಗ್ ಕೊಟ್ಟ ಖರ್ಗೆ, ಮೋದಿ, ಅಮಿತ್ ಶಾ, ಯಡಿಯೂರಪ್ಪ ಎಷ್ಟೇ ತಿಪ್ಪರಲಾಗ ಹಾಕಿದರು ಸರ್ಕಾರ ಗಟ್ಟಿಯಾಗಿ ಉಳಿಯಲಿದೆ. ಬಿಜೆಪಿಯವರ ಪ್ಲ್ಯಾನ್ ಸಕ್ಸಸ್ ಆಗುವುದಿಲ್ಲ ಎಂದರು.
ಎಸಿಬಿ ತನಿಖೆಯಾಗಬೇಕು:
ಜೆಡಿಎಸ್ ಶಾಸಕನನ್ನು ಬಿಜೆಪಿಗೆ ಸೆಳೆಯಲು ಅವರ ಪುತ್ರನಿಗೆ ನೀಡಿದ ಆಮಿಷದ ಬಗ್ಗೆ ಈಗಾಗಲೇ ಆಡಿಯೋ ಬಿಡುಗಡೆಯಾಗಿದೆ. ಈ ಬಗ್ಗೆ ಸ್ಪಿಕರ್, ಸಿಎಂ ಹಾಗೂ ಎಸಿಬಿ ಗಂಭೀರವಾಗಿ ಪರಿಗಣಿಸಬೇಕೆಂದು ಹೇಳುವ ಮೂಲಕ ತನಿಖೆಗೆ ಆಗ್ರಹಿಸಿದ ಖರ್ಗೆ, ತನಿಖೆಯಾದ್ರೆ ಮುಂದೆ ತಪ್ಪು ದಾರಿಗೆ ಹೋಗುವವರಿಗೆ ಮತ್ತು ತಪ್ಪು ದಾರಿಗೆ ಎಳೆಯುವರಿಗೆ ಧೈರ್ಯ ಬರುವುದಿಲ್ಲ ಎಂದು ಪರೋಕ್ಷವಾಗಿ ಯಡಿಯೂರಪ್ಪ ಕಾಲೆಳೆದಿದ್ದಾರೆ.
ಮಂಡ್ಯದಲ್ಲಿ ಸುಮಲತಾ ಅಂಬರೀಶ್ ಸ್ಪರ್ಧಿಸುವ ವಿಚಾರದಲ್ಲಿ ಹೈಕಮಾಂಡ್ ನಿರ್ಣಯ ತೆಗೆದುಕೊಳ್ಳಲಿದೆ. ಪ್ರತಿ ಮಾತಿನಲ್ಲಿ ಸತ್ರಾ ಸಾಲ್ ಮೇ ಕ್ಯಾ ಕಿಯಾ ಅಂತ ಕೇಳುವ ಮೂಲಕ ಮೋದಿ ಎಲ್ಲವನ್ನು ತಾವೇ ಮಾಡಿದಂತೆ ಅಹಂ ವ್ಯಕ್ತಪಡಿಸ್ತಾರೆ. ಸತ್ರಾ ಸಾಲ್ ಮೇ ಕಾಂಗ್ರೆಸ್ ಮಾತ್ರವಲ್ಲ, ವಿ.ಪಿ.ಸಿಂಗ್, ದೇವೇಗೌಡ ಸೇರಿ ಇತರ ಪಕ್ಷದವರು ಪಿಎಂ ಆಗಿದ್ದಾರೆ. ಅವರೆಲ್ಲರೂ ಏನು ಮಾಡೇ ಇಲ್ಲ. ಎಲ್ಲವನ್ನು ತಾನೇ ಮಾಡಿದ್ದಾಗಿ ಮೋದಿ ಬೀಗಿಕೊಳ್ಳುತ್ತಿದ್ದಾರೆ ಎಂದು ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು.
ಕಲಬುರಗಿ ಕ್ಷೇತ್ರದ ಬಗ್ಗೆ ಮೋದಿ ಗಮನ:
ಕಲಬುರಗಿ ಲೋಕಸಭೆಯ ಮೇಲೆ ಕಣ್ಣಿಟ್ಟಿರುವ ಕೇಂದ್ರ ಬಿಜೆಪಿ ನಾಯಕರು ಚಿಂಚೋಳಿ ಕಾಂಗ್ರೆಸ್ ಶಾಸಕ ಉಮೇಶ್ ಜಾಧವ್ ಸೆಳೆದು ತಮ್ಮ ವಿರುದ್ಧ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿಸಲು ಸ್ವತಃ ಮೋದಿ ಆಸಕ್ತಿ ತೋರುತ್ತಿದ್ದಾರೆಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಖರ್ಗೆ, ಕಲಬುರಗಿ ಕ್ಷೇತ್ರದ ಬಗ್ಗೆ ಮತ್ತು ನನ್ನ ಬಗ್ಗೆ ಪಿಎಂ ಮೋದಿ ಗಮನ ಹರಿಸುತ್ತಿದ್ದಾರೆ ಅಂದ್ರೆ ಒಳ್ಳೆಯದೇ. ಕಲಬುರಗಿ ಜನ ಸೆಡ್ಡು ಹೊಡೆದು ನಿಲ್ಲುತ್ತಾರೆ ಅನ್ನೋದು ಮೋದಿಗೆ ಗೊತ್ತಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂವಿಧಾನ ರಕ್ಷಿಸಿಕೊಂಡು ನಮ್ಮದೇಯಾದ ಸಿದ್ಧಾಂತದ ಮೇಲೆ ಚುನಾವಣೆಯಲ್ಲಿ ಹೋರಾಟ ಮಾಡುತ್ತೇನೆ. ಯಾರೇ ಎದುರಾಳಿಯಾಗಿ ಸ್ಪರ್ಧಿಸಲಿ ಎಂದರು.