ನವದೆಹಲಿ: ವಿರೋಧದ ನಡುವೆಯೂ ರಾಜ್ಯಸಭೆಯಲ್ಲಿ ಕೃಷಿ ಮಸೂದೆಗಳು ಅಂಗೀಕಾರವಾಗಿದ್ದು, ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಸಂಸದ ಮಲ್ಲಿಕಾರ್ಜುನ ಖರ್ಗೆ ಕಿಡಿಕಾರಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಮಲ್ಲಿಕಾರ್ಜುನ ಖರ್ಗೆ, ಪ್ರತಿ ಬಾರಿ ಪ್ರಧಾನಿ ನರೇಂದ್ರ ಮೋದಿ ತಮ್ಮ ಸರ್ಕಾರದ ಹೊಸ ಯೋಜನೆಗಳು ನವ ಭಾರತ ನಿರ್ಮಾಣಕ್ಕೆ ನಾಂದಿ ಹಾಡುತ್ತದೆ ಎಂದು ಹೇಳುತ್ತಾರೆ. ಆದರೆ ನೋಟು ರದ್ದತಿ, ಜಿಎಸ್ಟಿ, ಮೇಕ್ ಇನ್ ಇಂಡಿಯಾ, ಗರೀಬ್ ಕಲ್ಯಾಣ ಯೋಜನೆಯಂತೆ ಮತ್ತಷ್ಟು ಕತ್ತಲೆಗೆ ತಳ್ಳುತ್ತವೆ. ಇದೀಗ ಕೃಷಿ ಮಸೂದೆ ಮೂಲಕ ಪಿಎಂ ಮೋದಿ ಭಾರತದ ರೈತರನ್ನು ಸಂಕಷ್ಟಕ್ಕೆ ನೂಕುತ್ತಿದ್ದಾರೆ ಎಂದು ಹೇಳಿದ್ದಾರೆ.
ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳ (ಎಪಿಎಂಸಿ) ಭವಿಷ್ಯದ ಬಗ್ಗೆ ಮತ್ತು ರೈತರು ತಮ್ಮ ಉತ್ಪನ್ನಗಳಿಗೆ ಹೇಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್ಪಿ) ಪಡೆಯುತ್ತಾರೆ ಎಂಬುದರ ಬಗ್ಗೆ ಪ್ರತಿಭಟನಾ ನಿರತ ರೈತರಿಗೆ ಮನವರಿಕೆ ಮಾಡಲು ಬಿಜೆಪಿ ಸರ್ಕಾರಕ್ಕೆ ಸಾಧ್ಯವಾಗಿಲ್ಲ. ರೈತರ ಭವಿಷ್ಯವನ್ನು ಅಳಿಸಿಹಾಕಲು ಬಿಜೆಪಿಯವರು ತಮ್ಮ ಬಹುಮತವನ್ನು ಬಳಸಿಕೊಳ್ಳುತ್ತಿದ್ದಾರೆ. ಇದು ನಮ್ಮ ಕೃಷಿ ಆರ್ಥಿಕತೆಗೆ ಹಾನಿಕಾರಕವಾಗಿದೆ ಎಂದು ಖರ್ಗೆ ಟ್ವೀಟ್ ಮಾಡಿದ್ದಾರೆ.
ಇಂದು ರಾಜ್ಯಸಭೆಯಲ್ಲಿ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ರೈತರ ಉತ್ಪಾದನಾ ವ್ಯಾಪಾರ ಮತ್ತು ವಾಣಿಜ್ಯ (ಪ್ರಚಾರ ಮತ್ತು ಸೌಲಭ್ಯ) ಮಸೂದೆ- 2020 ಹಾಗೂ ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಮಸೂದೆ ಮತ್ತು ಅಗತ್ಯ ಸರಕುಗಳ (ತಿದ್ದುಪಡಿ) ಮಸೂದೆಗಳನ್ನು ಮಂಡಿಸಿದ್ದರು. ಇವುಗಳನ್ನು ರಾಜ್ಯಸಭೆ ಅಂಗೀಕರಿಸಿದೆ.
ಈ ಮಸೂದೆಗಳು ರೈತ ವಿರೋಧಿ ಹಾಗೂ ಕಾರ್ಪೋರೇಟ್ ಪರ ಮಸೂದೆಗಳಾಗಿವೆ, ಆಹಾರ ಭದ್ರತಾ ವ್ಯವಸ್ಥೆಗಳನ್ನ ದುರ್ಬಲಗೊಳಿಸುತ್ತವೆ ಎಂದು ದೇಶಾದ್ಯಂತ ಟೀಕೆ, ವಿರೋಧಗಳು ವ್ಯಕ್ತವಾಗಿವೆ. ಹರಿಯಾಣದಲ್ಲಿ ಯುವ ಕಾಂಗ್ರೆಸ್ ಹಾಗೂ ರೈತ ಸಂಘಟನೆಗಳು ಪ್ರತಿಭಟನೆಗಳನ್ನು ಸಹ ನಡೆಸುತ್ತಿವೆ.