ಹೈದರಾಬಾದ್ : ವಿಶ್ವಾದ್ಯಂತ ಜುಲೈ 12 ಅನ್ನು ಮಲಾಲಾ ದಿನವಾಗಿ ಆಚರಿಸಲಾಗುತ್ತದೆ. ಪಾಕಿಸ್ತಾನದ ಬಾಲ ಕಾರ್ಯಕರ್ತೆ ಮಲಾಲಾ ಯೂಸಫ್ ಜೈ ಅವರ ಶಿಕ್ಷಣದ ಹೋರಾಟವನ್ನು ಎತ್ತಿ ಹಿಡಿಯಲು ವಿಶ್ವಸಂಸ್ಥೆಯು ಈ ದಿನವನ್ನು ಆಚರಿಸುತ್ತಿದೆ.
ಜುಲೈ 12, 2013 ರಂದು, ಮಹಿಳಾ ಶಿಕ್ಷಣದ ಪ್ರಚಾರದಲ್ಲಿ ತೊಡಗಿರುವ ಹದಿನಾರು ವರ್ಷದ ಪಾಕಿಸ್ತಾನಿ ಬಾಲಕಿ ಮಲಾಲಾ ಯೂಸಫ್‌ಜೈ, ವಿಶ್ವಸಂಸ್ಥೆಯ (ಯುಎನ್) ಕೇಂದ್ರ ಕಚೇರಿಯಲ್ಲಿ ಶಿಕ್ಷಣದಲ್ಲಿ ಲಿಂಗ ಸಮಾನತೆಯ ಅಗತ್ಯತೆಯ ಬಗ್ಗೆ ಉತ್ಸಾಹ ಭರಿತ ಭಾಷಣ ಮಾಡಿದರು. ಜುಲೈ 12 ಮಲಾಲಾಳ ಜನ್ಮದಿನವೂ ಆಗಿದೆ. ಯುವ ಕಾರ್ಯಕರ್ತೆಯ ಹೋರಾಟಕ್ಕೆ ಗೌರವಾರ್ಥವಾಗಿ ಯುಎನ್ ಈ ದಿನವನ್ನು ಮಲಾಲಾ ದಿನವೆಂದು ಘೋಷಿಸಿತು.
ಮಲಾಲಾ ಯೂಸಫ್‌ಜೈ ಜುಲೈ 12, 1997 ರಂದು ಪಾಕಿಸ್ತಾನದ ಖೈಬರ್ ಪಖ್ತೂನ್ಖ್ವಾ ಪ್ರಾಂತ್ಯದ ಸ್ವಾತ್ ಕಣಿವೆಯ ಅತಿದೊಡ್ಡ ನಗರವಾದ ಮಿಂಗೋರಾದಲ್ಲಿ ಜನಿಸಿದರು. ಅವರು ಜಿಯಾವುದ್ದೀನ್ ಮತ್ತು ಟಾರ್ ಪೆಕೈ ಯೂಸಫ್‌ಜೈ ಅವರ ಪುತ್ರಿ. ಮಿಂಗೋರ ಗ್ರಾಮದ ಒಂದು ಶಾಲೆಯ ವಿದ್ಯಾರ್ಥಿನಿ ಮತ್ತು ಶಿಕ್ಷಣ ಕಾರ್ಯಕರ್ತೆ. ಹೆಣ್ಣುಮಕ್ಕಳು ಶಾಲೆಗೆ ಹೋಗುವುದನ್ನು ತಾಲಿಬಾನ್ ಸಂಘಟನೆಯು ನಿಷೇಧಿಸಿರುವ ಸ್ವಾತ್ ಕಣಿವೆಯಲ್ಲಿನ ಹುಡುಗಿಯರ ಶಿಕ್ಷಣ ಮತ್ತು ಮಹಿಳಾ ಹಕ್ಕುಗಳ ಪರ ತನ್ನ ಕ್ರಿಯಾತ್ಮಕ ಹೋರಾಟಕ್ಕಾಗಿ ಮಲಾಲಾ ಪ್ರಸಿದ್ಧಿ ಪಡೆದಳು.