ನವದೆಹಲಿ: 2024ರ ವೇಳೆಗೆ ಭಾರತವನ್ನು 5 ಟ್ರಿಲಿಯನ್ ಡಾಲರ್ ಆರ್ಥಿಕತೆ ಹೊಂದಿರುವ ರಾಷ್ಟ್ರವನ್ನಾಗಿ ಮಾಡುವ ಸವಾಲು ನಮ್ಮ ಮುಂದಿದೆ. ರಾಜ್ಯಗಳ ಸಹಕಾರದಿಂದ ಇದನ್ನು ಸಾಧಿಸಬೇಕಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ನೀತಿ ಆಯೋಗದ ಆಡಳಿತ ಮಂಡಳಿಯ 5ನೇ ಸಭೆಯಲ್ಲಿ ಮಾತನಾಡಿದ ಅವರು, ಭಾರತವನ್ನು ಸದೃಢ ಆರ್ಥಿಕತೆಯುಳ್ಳ ದೇಶವನ್ನಾಗಿ ಮಾಡಲು ಮೊದಲು ರಾಜ್ಯಗಳು ತಮ್ಮ ಸಾಮರ್ಥ್ಯವೇನೆಂದು ಅರಿಯಬೇಕು. ಆ ನಂತರ ಜಿಲ್ಲಾ ಹಂತದಿಂದ ಆರಂಭಿಸಿ ರಾಜ್ಯದ ಆರ್ಥಿಕ ವೃದ್ದಿಗೆ ಅಗತ್ಯ ಶ್ರಮ ವಹಿಸಬೇಕು ಎಂದು ಹೇಳಿದರು.
ನೀತಿ ಆಯೋಗವು, ಸಬ್ ಕ ಸಾಥ್, ಸಬ್ ಕ ವಿಕಾಸ್, ಸಬ್ ಕ ವಿಶ್ವಾಸ್ ಮಂತ್ರವನ್ನು ಸಾಧಿಸಲು ಮಹತ್ವದ ಪಾತ್ರ ವಹಿಸುತ್ತದೆ ಎಂದು ಬಣ್ಣಿಸಿದರು.