ಮುಂಬೈ ( ಮಹಾರಾಷ್ಟ್ರ ) :ಕರ್ನಾಟಕದ ಗಡಿ ಪ್ರದೇಶಗಳಲ್ಲಿ ವಾಸಿಸುವ ಮರಾಠಿ ಮಾತನಾಡುವ ಜನರಿಗಾಗಿ ಸರ್ಕಾರ ಕೊಲ್ಹಾಪುರದಲ್ಲಿ ಮರಾಠಿ ಮಾಧ್ಯಮ ಕಾಲೇಜು ಸ್ಥಾಪಿಸಲಿದೆ ಎಂದು ಮಹಾರಾಷ್ಟ್ರ ಉನ್ನತ ಮತ್ತು ತಾಂತ್ರಿಕ ಶಿಕ್ಷಣ ಸಚಿವ ಉದಯ್ ಸಮಂತ್ ತಿಳಿಸಿದ್ದಾರೆ.
ಕರ್ನಾಟಕದ ಮರಾಠಿ ಭಾಷಿಕರಿಗೆ ಕಾಲೇಜು ಸ್ಥಾಪಿಸಲು ಮುಂದಾದ ಮಹಾರಾಷ್ಟ್ರ ಸರ್ಕಾರ - ಕೊಲ್ಹಾಪುರದಲ್ಲಿ ಮರಾಠಿ ಕಾಲೇಜು
ಮರಾಠಿ ಮಾತನಾಡುವ ಗಡಿ ಭಾಗದ ಕರ್ನಾಟಕದ ಜನರ ಶೈಕ್ಷಣಿಕ ಅಗತ್ಯತೆಗಳನ್ನು ಪೂರೈಸಲು ಕೊಲ್ಹಾಪುರದಲ್ಲಿ ಮರಾಠಿ ಮಾಧ್ಯಮ ಕಾಲೇಜು ಸ್ಥಾಪಿಸಲು ಮಹಾರಾಷ್ಟ್ರ ಸರ್ಕಾರ ಮುಂದಾಗಿದೆ.
ನೆರೆಯ ರಾಜ್ಯದಲ್ಲಿ ವಾಸಿಸುವ ಮರಾಠಿ ಮಾತನಾಡುವ ಜನರ ಶೈಕ್ಷಣಿಕ ಅಗತ್ಯತೆಗಳನ್ನು ಪೂರೈಸಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಹೊಸ ಸರ್ಕಾರಿ ಕಾಲೇಜು ಕೊಲ್ಹಾಪುರದ ಶಿವಾಜಿ ವಿಶ್ವವಿದ್ಯಾಲಯದ ಉಪ ಕೇಂದ್ರವಾಗಲಿದೆ. ಕೊಲ್ಹಾಪುರ ಜಿಲ್ಲಾಧಿಕಾರಿ ಪ್ರಸ್ತಾವಿತ ಕಾಲೇಜಿಗೆ ಐದು ಎಕರೆ ಜಾಗ ಒದಗಿಸಲಿದ್ದು, ಅದರ ನಂತರ ಅಗತ್ಯವಿರುವ ಎಲ್ಲ ಅಧಿಕೃತ ಅನುಮತಿಗಳನ್ನು ನೀಡಲಾಗುವುದು ಎಂದು ಸಮಂತ್ ಹೇಳಿದ್ದಾರೆ.
ಮುಂದಿನ ಶೈಕ್ಷಣಿಕ ವರ್ಷದಿಂದ ಕಾಲೇಜು ಕಾರ್ಯಾಚರಣೆ ಪ್ರಾರಂಭಿಸುತ್ತದೆ. ಶಿವಾಜಿ ವಿಶ್ವವಿದ್ಯಾಲಯದ ಉಪಕುಲಪತಿ ನಿತಿನ್ ಕರ್ಮಲ್ಕರ್ ನೇತೃತ್ವದ ಸಮಿತಿಯು ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸುವ ವಿಧಾನಗಳನ್ನು ರೂಪಿಸಲಿದೆ ಎಂದು ಸಚಿವರು ತಿಳಿಸಿದ್ದಾರೆ. ಕರ್ನಾಟಕ - ಮಹಾರಾಷ್ಟ್ರ ಗಡಿ ಪ್ರದೇಶಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮರಾಠಿ ಮಾತನಾಡುವ ಜನರಿದ್ದಾರೆ.