ಮುಂಬೈ:ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ನೂತನವಾಗಿ ಚುನಾಯಿತರಾದ ಶಾಸಕರು ಇಂದು ವಿಶೇಷ ಕಲಾಪದಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಕರೆದಿದ್ದ ವಿಶೇಷ ಕಲಾಪದಲ್ಲಿ, ರಾಜ್ಯಪಾಲರು ನೇಮಕ ಮಾಡಿದ್ದ ಹಂಗಾಮಿ ಸ್ಪೀಕರ್ ಕಾಳಿದಾಸ್ ಕೊಲಂಬ್ಕರ್ ಪ್ರತಿಜ್ಞಾವಿಧಿ ಬೋಧಿಸಿದ್ದಾರೆ.
ಠಾಕ್ರೆ ಕುಟುಂಬದಿಂದ ಮೊದಲ ಪ್ರಮಾಣ ವಚನ:
ಮಹಾರಾಷ್ಟ್ರದ ವರ್ಲಿ ಕ್ಷೇತ್ರದಿಂದ ಚುನಾವಣೆ ಗೆದ್ದಿದ್ದ ಆದಿತ್ಯ ಠಾಕ್ರೆ, ಠಾಕ್ರೆ ಕುಟುಂಬದ ಮೊದಲ ವ್ಯಕ್ತಿಯಾಗಿ ವಿಧಾನಸಭೆ ಪ್ರವೇಶಿಸಿದ್ದರು.
ಹಲವು ವರ್ಷಗಳಿಂದ ರಾಜಕಾರಣದಲ್ಲಿದ್ದರೂ ಠಾಕ್ರೆ ಕುಟುಂಬದ ಯಾರೂ ಸಹ ಚುನಾವಣೆ ಗೆದ್ದು ವಿಧಾನಸಭೆ ಪ್ರವೇಶಿಸಿರಲಿಲ್ಲ. ಹೀಗಾಗಿ ಆದಿತ್ಯ ಠಾಕ್ರೆಯ ಇಂದಿನ ಪ್ರಮಾಣ ವಚನ ಕುಟುಂಬದ ಪಾಲಿಗೆ ಪ್ರಥಮ ಪ್ರಮಾಣ ವಚನವಾಗಿತ್ತು.
ಉದ್ಧವ್ ಠಾಕ್ರೆಯಿಂದ ರಾಜ್ಯಪಾಲರ ಭೇಟಿ:
ಮಹಾರಾಷ್ಟ್ರದ ಮಹಾಮೈತ್ರಿಕೂಟದ ನಿರ್ಣಯದಂತೆ ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ನಾಳೆ ಸಂಜೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಈ ನಿಟ್ಟಿನಲ್ಲಿ ಉದ್ಧವ್ ಠಾಕ್ರೆ ತಮ್ಮ ಪತ್ನಿಯೊಂದಿಗೆ ಇಂದು ಬೆಳಗ್ಗೆ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿಯನ್ನೇ ಭೇಟಿ ಮಾಡಿದ್ದಾರೆ.