ಮುಂಬೈ:ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ನಡೆದು 15 ದಿನ ಕಳೆದರೂ ಇಲ್ಲಿಯವರೆಗೆ ಸರ್ಕಾರ ರಚನೆಯಾಗಿಲ್ಲ. ಶಿವಸೇನೆಯ 50:50 ಸೂತ್ರಕ್ಕೆ ಬಿಜೆಪಿ ಒಪ್ಪಿಗೆ ಸೂಚಿಸದ ಕಾರಣಕ್ಕಾಗಿ ಅಲ್ಲಿನ ರಾಜಕಾರಣ ಮತ್ತಷ್ಟು ಜಟಿಲಗೊಳ್ಳುತ್ತಾ ಸಾಗಿದೆ. ಈ ನಡುವೆ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಚುನಾವಣೆಯಲ್ಲಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ ಬಿಜೆಪಿಗೆ ಸರ್ಕಾರ ರಚನೆ ಮಾಡುವಂತೆ ಆಹ್ವಾನ ನೀಡಿದ್ದಾರೆ.
ಮಹಾರಾಷ್ಟ್ರ ಸರ್ಕಾರ ರಚನೆ: ಬಿಜೆಪಿಗೆ ರಾಜ್ಯಪಾಲರ ಆಹ್ವಾನ
ಮಹಾರಾಷ್ಟ್ರದಲ್ಲಿ ನೂತನ ಸರ್ಕಾರ ರಚನೆ ಕಸರತ್ತು ದಿನದಿಂದ ದಿನಕ್ಕೆ ನಿಗೂಢವಾಗುತ್ತಾ ಸಾಗುತ್ತಿದೆ. ಈ ಮಧ್ಯೆ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಬಿಜೆಪಿಗೆ ಸರ್ಕಾರ ರಚನೆ ಮಾಡುವಂತೆ ಆಹ್ವಾನ ನೀಡಿದ್ದಾರೆ.
ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 105 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಆದ್ರೆ ಸರ್ಕಾರ ರಚನೆಗೆ ಬೇಕಿದ್ದ ಸದಸ್ಯ ಬಲದ ಕೊರತೆ ಬಿಜೆಪಿಯನ್ನು ಕಾಡುತ್ತಿದೆ. ಮೈತ್ರಿ ಪಕ್ಷ ಶಿವಸೇನೆ ಮುಖ್ಯಮಂತ್ರಿ ಸ್ಥಾನಕ್ಕೆ ಪಟ್ಟುಹಿಡಿದ ಕಾರಣ ಸರ್ಕಾರ ರಚನೆ ವಿಚಾರ ಕಗ್ಗಂಟಾಗಿದೆ. ಈ ಬೆಳವಣಿಗೆಗಳ ಮಧ್ಯೆ ಪ್ರಸಕ್ತ ವಿಧಾನಸಭೆಯ ಕಾಲಾವಧಿಕೊನೆಗೊಳ್ತಿದ್ದಂತೆ ದೇವೇಂದ್ರ ಫಡ್ನವೀಸ್ ಮುಖ್ಯಮಂತ್ರಿ ಸ್ಥಾನಕ್ಕೆ ನಿನ್ನೆ ರಾಜೀನಾಮೆ ಸಲ್ಲಿಸಿದ್ದರು.
288 ಕ್ಷೇತ್ರಗಳ ಪೈಕಿ ಬಿಜೆಪಿ 105, ಶಿವಸೇನೆ 56, ಎನ್ಸಿಪಿ 54 ಹಾಗೂ ಕಾಂಗ್ರೆಸ್ 44 ಕ್ಷೇತ್ರಗಳಲ್ಲಿ ಗೆಲುವು ದಾಖಲಿಸಿತ್ತು. ಬಿಜೆಪಿ+ಶಿವಸೇನೆ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸಿದ್ರೆ, ಕಾಂಗ್ರೆಸ್+ಎನ್ಸಿಪಿ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸಿದ್ದವು.