ನವದೆಹಲಿ: ಮಹಾರಾಷ್ಟ್ರ ಸರ್ಕಾರ ಮತ್ತು ಕೇಂದ್ರ ರೈಲ್ವೆ ಇಲಾಖೆ ನಡುವೆ ಮುಸುಕಿನ ರಾಜಕೀಯ ಗುದ್ದಾಟ ಪ್ರಾರಂಭವಾಗಿದ್ದು, ವಲಸೆ ಕಾರ್ಮಿಕರಿಗಾಗಿ ರೈಲುಗಳನ್ನು ಬಿಟ್ಟರೂ ಅದನ್ನು ಮಹಾ ಸರ್ಕಾರ ಸರಿಯಾಗಿ ಬಳಸಿಕೊಳ್ಳುತ್ತಿಲ್ಲ ಎಂದು ರೈಲ್ವೆ ಸಚಿವರು ಆರೋಪಿಸಿದ್ದಾರೆ.
ಶ್ರಮಿಕ್ ರೈಲುಗಳ ವಿಚಾರದಲ್ಲಿ ಮಹಾ ಸರ್ಕಾರ ರಾಜಕೀಯ ಮಾಡುತ್ತಿದೆ: ರೈಲ್ವೆ ಸಚಿವರ ಆರೋಪ - ಮಹಾರಾಷ್ಟ್ರ ಸರ್ಕಾರದ ವಿರುದ್ಧ ರೈಲ್ವೆ ಸಚಿವರ ಆರೋಪ
ವಲಸೆ ಕಾರ್ಮಿಕರಿಗಾಗಿ ಮಹಾರಾಷ್ಟ್ರದಿಂದ ನೂರಾರು ವಿಶೇಷ ಶ್ರಮಿಕ್ ರೈಲುಗಳ ವ್ಯವಸ್ಥೆ ಮಾಡಿದ್ದರೂ ಪ್ರಯಾಣಿಕರನ್ನು ತಲುಪಿಸುವಲ್ಲಿ ರಾಜ್ಯ ಸರ್ಕಾರ ನಿರ್ಲಕ್ಷ್ಯ ತೋರುತ್ತಿದೆ. ಹೀಗಾಗಿ ಪ್ರಯಾಣಿಕರಿಲ್ಲದೆ ಕೇವಲ ಶೇ. 10ರಷ್ಟು ರೈಲುಗಳು ಮಾತ್ರ ಸಂಚಾರ ನಡೆಸಿವೆ ಎಂದು ರೈಲ್ವೆ ಸಚಿವ ಪಿಯೂಷ್ ಗೋಯಲ್ ಆರೋಪಿಸಿದ್ದಾರೆ.
![ಶ್ರಮಿಕ್ ರೈಲುಗಳ ವಿಚಾರದಲ್ಲಿ ಮಹಾ ಸರ್ಕಾರ ರಾಜಕೀಯ ಮಾಡುತ್ತಿದೆ: ರೈಲ್ವೆ ಸಚಿವರ ಆರೋಪ Maharashtra govt politicising Shramik trains](https://etvbharatimages.akamaized.net/etvbharat/prod-images/768-512-7361197-117-7361197-1590551261100.jpg)
ನಾಲ್ಕು ಗಂಟೆಗಳ ಅವಧಿಯಲ್ಲಿ ಈ ಬಗ್ಗೆ ಸರಣಿ ಟ್ವೀಟ್ಗಳನ್ನು ಮಾಡಿರುವ ರೈಲ್ವೆ ಸಚಿವ ಪಿಯೂಷ್ ಗೋಯಲ್, ಮಹಾರಾಷ್ಟ್ರದಿಂದ ಓಡಾಟ ನಡೆಸಲು ತಯಾರಾಗಿದ್ದ ವಿಶೇಷ ಶ್ರಮಿಕ್ ರೈಲುಗಳು ಪ್ರಯಾಣಿಕರ ಕೊರತೆಯಿಂದಾಗಿ ಸಂಚಾರ ನಡೆಸುವಲ್ಲಿ ವಿಫಲವಾಗಿವೆ. ಸೋಮವಾರ ರಾತ್ರಿ 11 ಗಂಟೆಯ ಹೊತ್ತಿಗೆ 145 ರೈಲುಗಳು ಸಂಚರಿಸಲು ಸಿದ್ಧವಾಗಿದ್ದವು. ಆದರೆ ಪ್ರಯಾಣಿಕರ ಕೊರತೆಯಿಂದಾಗಿ ಕೇವಲ 60 ರೈಲುಗಳು ಮಾತ್ರ ಓಡಾಟ ನಡೆಸಿವೆ ಎಂದಿದ್ದಾರೆ.
ಮಂಗಳವಾರ ಸಂಜೆ 6 ಗಂಟೆಯವರೆಗೆ 145 ರೈಲುಗಳ ಪೈಕಿ 85 ರೈಲುಗಳು ಸಂಚರಿಸಬೇಕಿತ್ತು. ಆದರೆ ಪ್ರಯಾಣಿಕರನ್ಜು ಕರೆ ತರಲು ರಾಜ್ಯ ಸರ್ಕಾರ ವ್ಯವಸ್ಥೆ ಮಾಡದ ಕಾರಣ ಕೇವಲ 27 ರೈಲುಗಳು ಅಂದರೆ ಶೇ. 10ರಷ್ಟು ಮಾತ್ರ ಓಡಾಟ ನಡೆಸಿವೆ. ಬಡ ಕಾರ್ಮಿಕರನ್ನು ಅವರ ಊರುಗಳಿಗೆ ತಲುಪಿಸಲು ದಯವಿಟ್ಟು ಸಹಾಯ ಮಾಡಬೇಕೆಂದು ನಾನು ಮಹಾರಾಷ್ಟ್ರ ಸರ್ಕಾರಕ್ಕೆ ವಿನಂತಿ ಮಾಡುತ್ತೇನೆ ಎಂದು ಗೋಯಲ್ ಹೇಳಿದ್ದಾರೆ.