ನವದೆಹಲಿ: ಮಹಾರಾಷ್ಟ್ರ ಸರ್ಕಾರ ರಚನೆ ಬಿಕ್ಕಟು ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಸುದೀರ್ಘ ವಿಚಾರಣೆ ನಡೆಸಿದ್ದು, ತೀರ್ಪನ್ನು ನಾಳೆಗೆ ಕಾಯ್ದಿರಿಸಿದೆ.
ಮಹಾರಾಷ್ಟ್ರ ಸರ್ಕಾರ ರಚನೆಯನ್ನು ಆಕ್ಷೇಪಿಸಿ ಶಿವಸೇನೆ, ಎನ್ಸಿಪಿ ಹಾಗೂ ಕಾಂಗ್ರೆಸ್ ಸುಪ್ರೀಂಕೋರ್ಟ್ನಲ್ಲಿ ಸಲ್ಲಿಕೆ ಮಾಡಿರುವ ರಿಟ್ ಅರ್ಜಿ ವಿಚಾರಣೆ ಸಂಬಂಧ ಸುಪ್ರೀಂಕೋರ್ಟ್ ತ್ರೀಸದಸ್ಯಪೀಠದಲ್ಲಿ ಸುದೀರ್ಘ ವಾದ- ಪ್ರತಿವಾದ ಇಂದು ನಡೆಯಿತು. ಭಾನುವಾರ ವಾದ - ಪ್ರತಿವಾದ ನಡೆದಿದ್ದು, ಅರ್ಜಿಯ ವಿಚಾರಣೆ ಹಾಗೂ ತೀರ್ಪನ್ನು ಇಂದಿಗೆ ಕಾಯ್ದಿರಿಸಿತ್ತು. ಜಸ್ಟೀಸ್ ಎನ್.ವಿ.ರಮಣ, ಅಶೋಕ್ ಭೂಷಣ್ ಹಾಗೂ ಸಂಜೀವ್ ಖನ್ನಾ ಪೀಠ ಸದ್ಯ ವಾದವನ್ನು ಆಲಿಸಿ ನಾಳೆಗೆ ತೀರ್ಪು ಕಾಯ್ದಿರಿಸಿದೆ.
ತುಷಾರ್ ಮೆಹ್ತಾ ವಾದ:
ಸರ್ಕಾರ ರಚನೆಗೆ ಸಂಬಂಧಿಸಿದಂತೆ ರಾಜ್ಯಪಾಲರು ಬಿಜೆಪಿಯಿಂದ ಆರಂಭವಾಗಿ ವಿವಿಧ ಪಕ್ಷಕ್ಕೆ ಆಹ್ವಾನ ನೀಡಿದ್ದನ್ನು ಹೇಳುತ್ತಾ ವಾದ ಮಂಡನೆ ಆರಂಭಿಸಿದರು.
ನ.22ರಂದು ಅಜಿತ್ ಪವಾರ್ ನೀಡಿರುವ ಪತ್ರದಲ್ಲಿ ಚುನಾಯಿತರಾದ ಎಲ್ಲ ಶಾಸಕರು(54) ಬಿಜೆಪಿಗೆ ಬೆಂಬಲ ನೀಡುತ್ತಿದೆ ಎಂದು ಉಲ್ಲೇಖ ಮಾಡಲಾಗಿದೆ.
ಅಜಿತ್ ಪವಾರ್ ಹೇಳಿದಂತೆ ಎನ್ಸಿಪಿಯ ಎಲ್ಲ ಚುನಾಯಿತ ಶಾಸಕರು ತಮ್ಮ ಪಕ್ಷಕ್ಕೆ ಬೆಂಬಲ ಸೂಚಿಸಿದ್ದಾರೆ ಎನ್ನುವುದನ್ನು ಸಿಎಂ ದೇವೇಂದ್ರ ಫಡ್ನವೀಸ್ ಸಹ ತಾವು ಸಲ್ಲಿಸಿರುವ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಇದೇ ಆಧಾರದಲ್ಲಿ ಫಡ್ನವೀಸ್ ಸರ್ಕಾರ ರಚನೆಗೆ ರಾಜ್ಯಪಾಲರು ಅವಕಾಶ ಮಾಡಿಕೊಟ್ಟಿದ್ದಾರೆ.
ನ.30ರವರೆಗೆ ಬಿಜೆಪಿ ಸರ್ಕಾರಕ್ಕೆ ಬಹುಮತ ಸಾಬೀತಿಗೆ ಸಮಯಾವಕಾಶವಿದೆ. ಆದರೆ ಚುನಾವಣೆ ವೇಳೆ ಮೈತ್ರಿ ಮಾಡಿಕೊಂಡಿದ್ದ ಪಕ್ಷ ಶಿವಸೇನೆ ತಕ್ಷಣವೇ ಬಹುಮತ ಸಾಬೀತಿಗೆ ಪಟ್ಟುಹಿಡಿದಿದೆ.
ಮುಕುಲ್ ರೋಹ್ಟಗಿ ವಾದ:
ವಾರಾಂತ್ಯದಲ್ಲಿ ಬಿಜೆಪಿ ಹಾಗೂ ಅಜಿತ್ ಪವಾರ್ ಅವರಿಗೆ ನಿಷ್ಠೆ ತೋರಿದ್ದ ಎನ್ಸಿಪಿ ಶಾಸಕರು ಸದ್ಯ ಶರದ್ ಪವಾರ್ ಅವರಿಗೆ ಬೆಂಬಲ ಸೂಚಿಸುತ್ತಿದ್ದಾರೆ.
ರಾಜ್ಯಪಾಲರು ತಮ್ಮ ಮುಂದೆ ಪ್ರಸ್ತುತಪಡಿಸಲಾದ ಕೆಲ ದಾಖಲೆಗಳಿಗೆ ಸೂಕ್ತವಾಗಿ ನಡೆದುಕೊಂಡಿದ್ದಾರೆ. ರಾಜ್ಯಪಾಲರ ನಡೆಯನ್ನು ಉಳಿದ ಪಕ್ಷಗಳು ಪ್ರಶ್ನಿಸಿದ್ದವು. ರಾಜ್ಯಪಾಲರು ತಮ್ಮ ಪರಿಧಿಯಲ್ಲೇ ಕಾರ್ಯನಿರ್ವಹಿಸಿದ್ದಾರೆ. ಪತ್ರದಲ್ಲಿ ಎನ್ಸಿಪಿ ಶಾಸಕರ ಬೆಂಬಲದ ಸಹಿ ಇದೆ.
ಈ ವೇಳೆ ಮಧ್ಯ ಪ್ರವೇಶಿಸಿದ ಜಸ್ಟೀಸ್ ಸಂಜೀವ್ ಖನ್ನಾ, ಆದರೆ ಸಿಎಂ ವಿಧಾನಸಭೆಯಲ್ಲಿ ಬಹುಮತ ಹೊಂದಿದ್ದಾರೆಯೇ ಎನ್ನುವ ಪ್ರಶ್ನೆ ಇದೆ ಎಂದರು. ಬಳಿಕ ವಾದ ಮುಂದುವರೆಸಿದ ರೋಹ್ಟಗಿ, ಮುಖ್ಯ ವಿಚಾರದಲ್ಲಿ ಮಧ್ಯಂತರ ಆದೇಶ ನೀಡಲು ಸಾಧ್ಯವಿದೆಯೇ ಎಂದು ಪೀಠದ ಮುಂದೆ ಕೇಳಿದ್ದಾರೆ.
ಆರಂಭದಲ್ಲಿ ಶಾಸಕರು ಪ್ರಮಾಣವಚನ ಮಾಡಲಿದ್ದಾರೆ. ನಂತರ ಸ್ಪೀಕರ್ ಆಯ್ಕೆಯಾಗಲಿದೆ. ಆ ಬಳಿಕವಷ್ಟೇ ಬಹುಮತ ಸಾಬೀತು ಪ್ರಕ್ರಿಯೆ ನಡೆಯಲು ಸಾಧ್ಯ.
ಮಣಿಂದರ್ ಸಿಂಗ್ ವಾದ ಮಂಡನೆ:
ಅಜಿತ್ ಪವಾರ್ ಪರ ಹಿರಿಯ ವಕೀಲ ಮಣಿಂದರ್ ಸಿಂಗ್ ವಾದ ಮಂಡನೆ ಮಾಡಿದ್ದಾರೆ. ಅಜಿತ್ ಪವಾರ್ ಅವರು ಎನ್ಸಿಪಿ ನಾಯಕನಾಗಿಯೇ ಎಲ್ಲ ಕಾರ್ಯನಿರ್ವಹಿಸಿದ್ದಾರೆ. ನ.22ರ ಬಳಿಕ ಎನ್ಸಿಪಿ ನಾಯಕನಲ್ಲ ಎನ್ನುವುದನ್ನು ಸಾಬೀತುಪಡಿಸಲು ಏನೂ ಸಾಕ್ಷ್ಯವಿಲ್ಲ.
ಪತ್ರ ಹಾಗೂ ಸೂಕ್ತ ದಾಖಲೆಗಳನ್ನು ಕೋರ್ಟ್ ಪರಿಗಣಿಸುತ್ತದೆಯೋ ಎನ್ನುವುದು ಸ್ಪಷ್ಟಪಡಿಸಬೇಕಿದೆ ಎಂದು ಮಣಿಂದರ್ ಸಿಂಗ್ ಪೀಠಕ್ಕೆ ಪ್ರಶ್ನೆ ಮಾಡಿದ್ದಾರೆ.