ಮುಂಬೈ:ದಿನದಿಂದ ದಿನಕ್ಕೆ ಮಹಾರಾಷ್ಟ್ರ ಸರ್ಕಾರ ರಚನೆ ಕೂತೂಹಲ ಮೂಡಿಸುತಿದ್ದು ಬಿಜೆಪಿ, ಶಿವಸೇನೆ ನಂತರ ರಾಜ್ಯಪಾಲರು ಎನ್ಸಿಪಿಗೆ ಸರ್ಕಾರ ರಚನೆ ಮಾಡಲು ಆಹ್ವಾನ ನೀಡಿದ್ದಾರೆ.
ರಾಜ್ಯಪಾಲರನ್ನ ಭೇಟಿ ಮಾಡಿದ ನಂತರ ಮಾತನಾಡಿರುವ ಎನ್ಸಿಪಿ ನಾಯಕ ಜಯಂತ್ ಪಾಟೀಲ್ ರಾಜ್ಯಪಾಲರ ಆಹ್ವಾನದ ಮೇರೆಗೆ ಅವರನ್ನ ಭೇಟಿ ಮಾಡಿದ್ದೇವೆ. ಭೇಟಿ ವೇಳೆ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಅವರು ಸರ್ಕಾರ ರಚನೆ ಮಾಡಲು ಎನ್ಸಿಪಿ ಪಕ್ಷವನ್ನ ಆಹ್ವಾನಿಸಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಸಾಧ್ಯವಾದಷ್ಟು ಬೇಗ ನಿಮಗೆ ನಮ್ಮ ನಿಲುವು ತಿಳಿಸುತ್ತೆವೆ ಎಂದು ಹೇಳಿದ್ದೇವೆ. ನಮ್ಮ ಮಿತ್ರ ಪಕ್ಷವಾದ ಕಾಂಗ್ರೆಸ್ ಜೊತೆ ಚರ್ಚೆ ನಡೆಸಿದ ನಂತರ ತೀರ್ಮಾನ ಕೈಗೊಳ್ಳಲಾಗುತ್ತೆ ಎಂದು ಜಯಂತ್ ಪಾಟೀಲ್ ತಿಳಿಸಿದ್ದಾರೆ.
ಶನಿವಾರ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಚುನಾವಣೆಯಲ್ಲಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ ಬಿಜೆಪಿಗೆ ಸರ್ಕಾರ ರಚನೆ ಮಾಡುವಂತೆ ಆಹ್ವಾನ ನೀಡಿದ್ದರು. ಆದರೆ ನಾವು ಸರ್ಕಾರ ರಚನೆ ಮಾಡುವುದಿಲ್ಲ ಎಂದು ಬಿಜೆಪಿ ನಾಯಕರು ಸ್ಪಷ್ಟಪಡಿಸಿದ್ದರು. ನಂತರ ಎರಡನೇ ದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಶಿವಸೇನೆ ಪಕ್ಷಕ್ಕೆ ಸರ್ಕಾರ ರಚನೆ ಮಾಡುವಂತೆ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಆಹ್ವಾನ ನೀಡಿದ್ದರು. ಇಂದು ರಾಜ್ಯಪಾಲರ ಬಳಿ ಮೂರು ದಿನ ಕಾಲಾವಾಕಾಶ ನೀಡುವಂತೆ ಶಿವಸೇನೆ ಬೇಡಿಕೆ ಸಲ್ಲಿಸಿತ್ತು.
ಶಿವಸೇನೆ ನಾಯಕರ ಬೇಡಿಕೆ ತಿರಸ್ಕರಿಸಿರುವ ರಾಜ್ಯಪಾಲರು ಮೂರನೇ ದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಎನ್ಸಿಪಿಗೆ ಸರ್ಕಾರ ರಚನೆ ಮಾಡುವಂತೆ ಆಹ್ವಾನ ನೀಡಿದ್ದು, ಮಂಗಳವಾರ ರಾತ್ರಿ 8:30ರ ಒಳಗೆ ತಮ್ಮ ನಿಲುವು ತಿಳಿಸುವಂತೆ ಗಡುವು ನೀಡಿದ್ದಾರೆ.