ಔರಂಗಾಬಾದ್:ಮಹಾರಾಷ್ಟ್ರ ಕೃಷಿ ಸಚಿವ ದಾದಾ ಭೂಸೆ ರೈತನ ವೇಷದಲ್ಲಿ ಔರಂಗಾಬಾದ್‌ನ ರಸಗೊಬ್ಬರ ಅಂಗಡಿಯೊಂದಕ್ಕೆ ಭೇಟಿ ನೀಡಿ ಶಾಕ್ ನೀಡಿದ್ದಾರೆ.
ಸ್ಥಳೀಯ ವ್ಯಾಪಾರಿಗಳ ವಿರುದ್ಧ ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಸ್ವತಃ ಭೇಟಿ ನೀಡುವ ಮೊದಲು ಪರಿಶೀಲಿಸಲು ಸಚಿವರು ನಕಲಿ ಗ್ರಾಹಕರನ್ನು ನವ ಭಾರತ್ ಎಂಬ ರಸಗೊಬ್ಬರ ಅಂಗಡಿಗೆ ಕಳುಹಿಸಿದ್ದಾರೆ. ನಂತರ ಅಂಗಡಿಗೆ ಹೋದ ಸಚಿವರು 10 ಚೀಲ ಯೂರಿಯಾಗೆ ಬೇಡಿಕೆ ಇಟ್ಟಿದ್ದಾರೆ. ಆದರೆ ಅಂಗಡಿಯವರು ಸ್ಟಾಕ್ ಇಲ್ಲ ಎಂದಿದ್ದಾರೆ.
ಸಚಿವರ ಭೇಟಿಯ ಬಗ್ಗೆ ತಿಳಿದ ಕೃಷಿ ಇಲಾಖೆ ಅಧಿಕಾರಿಗಳು ಅಂಗಡಿಗೆ ಧಾವಿಸಿದ್ದಾರೆ. ನಂತರ ಸಚಿವರು ಅಂಗಡಿಯ ಬ್ಯಾಲೆನ್ಸ್ ಶೀಟ್ ಪರಿಶೀಲಿಸಲು ಸ್ಟಾಕ್ ರಿಜಿಸ್ಟರ್ ನಿಡುವಂತೆ ಕೇಳಿದ್ದಾರೆ.
ಕೃಷಿ ಅಧಿಕಾರಿಗಳೊಂದಿಗೆ ಅಂಗಡಿಯ ಗೋದಾಮಿಗೆ ದಾಳಿ ನಡೆಸಿದಾಗ ಅಲ್ಲಿ 1,386 ಚೀಲ ಯೂರಿಯಾ ರಸಗೊಬ್ಬರದ ಚೀಲಗಳು ಪತ್ತೆಯಾಗಿವೆ. ಅಂಗಡಿಯವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಿದ ಸಚಿವರು, ಕೃಷಿ ಇಲಾಖೆಯ ಗುಣಮಟ್ಟ ನಿಯಂತ್ರಣ ಅಧಿಕಾರಿಯನ್ನು ಕಡ್ಡಾಯ ರಜೆ ಮೇಲೆ ಕಳುಹಿಸಿದ್ದಾರೆ.