ಮಹಾರಾಷ್ಟ್ರ: ರೈಲ್ವೆ ಹಳಿಗಳ ಮೇಲೆ ಮಲಗಿದ್ದ ವಲಸೆ ಕಾರ್ಮಿಕರ ಮೇಲೆ ಗೂಡ್ಸ್ ರೈಲು ಹರಿದಿದೆ. ಪರಿಣಾಮ 16 ಮಂದಿ ದಾರುಣವಾಗಿ ಸಾವನ್ನಪ್ಪಿದ್ದಾರೆ. ಈ ದುರ್ಘಟನೆ ಮಹಾರಾಷ್ಟ್ರದ ಔರಂಗಾಬಾದ್ ಜಿಲ್ಲೆಯಲ್ಲಿ ಬೆಳಗ್ಗಿನ ಜಾವ ಸಂಭವಿಸಿದೆ.
ಈಘಟನೆಯಲ್ಲಿ ಸಾವಿಗೀಡಾದ ವಲಸೆ ಕಾರ್ಮಿಕರು ಮಹಾರಾಷ್ಟ್ರದ ಔರಂಗಾಬಾದ್ ಜಿಲ್ಲೆಯಿಂದ ಮಧ್ಯಪ್ರದೇಶಕ್ಕೆ ಹಿಂತಿರುಗಬೇಕಿದ್ದರು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬೆಳಗ್ಗೆ 5.15ರ ಸುಮಾರಿಗೆ ದುರ್ಘಟನೆ ಸಂಭವಿಸಿದ್ದು, ಎಲ್ಲರೂ ರೈಲ್ವೆ ಹಳಿ ಹಿಡಿದುಕೊಂಡು ತವರು ಸೇರಿಕೊಳ್ಳುವ ಆತುರದಲ್ಲಿದ್ದರು. ಈ ವೇಳೆ ರಾತ್ರಿ ರೈಲ್ವೆ ಹಳಿ ಮೇಲೆ ಕೊಂಚ ವಿಶ್ರಾಂತಿಗಾಗಿ ಮಲಗಿದ್ದಾರೆ. ಹೀಗೆ ಮಲಗಿದ್ದವರು ಸಿಹಿನಿದ್ರೆಗೆ ಜಾರಿದರು. ನಡೆದು ಸುಸ್ತಾಗಿ ಮಲಗಿದ್ದ ಅವರಿಗೆ ಹಳಿಯಲ್ಲಿ ರೈಲು ಬಂದಿದ್ದೇ ಗೊತ್ತಾಗಲಿಲ್ಲ. 21 ಕಾರ್ಮಿಕರ ಪೈಕಿ 16 ಮಂದಿಯ ಮೈಮೇಲೆ ರೈಲು ಹರಿದು ದೇಹಗಳು ಛಿದ್ರ ಛಿದ್ರವಾಗಿದೆ. ಈ ವೇಳೆ ಇಬ್ಬರು ಹಳಿಯಿಂದ ದೂರದಲ್ಲಿದ್ದು ಬದುಕುಳಿದಿದ್ದಾರೆ. ಘಟನೆ ಮಡಿದ ಜೀವಗಳನ್ನು ಕಂಡ ಇಬ್ಬರು ಕಾರ್ಮಿಕರು ತಮ್ಮವರನ್ನು ಕಳೆದುಕೊಂಡು ಮಾನಸಿಕವಾಗಿ ತೀವ್ರ ರೀತಿಯಲ್ಲಿ ಜರ್ಜರಿತರಾಗಿದ್ದಾರೆ. ಹೀಗಾಗಿ ಇಬ್ಬರಿಗೂ ವಿಶೇಷವಾಗಿ ಕೌನ್ಸೆಲಿಂಗ್ ನಡೆಸಲಾಗುತ್ತಿದೆ.