ನವದೆಹಲಿ:ಬಿಹಾರ ವಿಧಾನಸಭಾ ಚುನಾವಣಾ ಕಣ ರಂಗೇರಿದ್ದು, ನಾಮಪತ್ರ ಸಲ್ಲಿಸುವ ಪ್ರಕ್ರಿಯೆ ಈಗಾಗಲೇ ಪ್ರಾರಂಭವಾಗಿದೆ. ಆದರೆ ಎರಡು ಪ್ರಮುಖ ರಾಜಕೀಯ ಮೈತ್ರಿಗಳಾದ ಎನ್‌ಡಿಎ ಮತ್ತು ಮಹಾಘಟಬಂಧನ್ ಈವರೆಗೆ ಯಾವುದೇ ಅಧಿಕೃತ ಅಭ್ಯರ್ಥಿಯನ್ನು ಘೋಷಿಸಿಲ್ಲ.
'ಮಹಾಘಟಬಂಧನ್' ಸೀಟು ಹಂಚಿಕೆ ಅಂತಿಮಗೊಂಡಿದ್ದು, ನಾಳೆ ಘೋಷಣೆಯಾಗುವ ಸಾಧ್ಯತೆ ಇದೆ. ಸೀಟು ಹಂಚಿಕೆ ವ್ಯವಸ್ಥೆಯನ್ನು ಒಪ್ಪಲಾಗಿದೆ. ಈ ಬಗ್ಗೆ ನಾಳೆ ಪಾಟ್ನಾದಲ್ಲಿ ಘೋಷಿಸುವ ಸಾಧ್ಯತೆಯಿದೆ ಎಂದು ಬಿಹಾರದ ಕಾಂಗ್ರೆಸ್ ಪಕ್ಷದ ಉನ್ನತ ಮೂಲಗಳು ತಿಳಿಸಿವೆ.
ರಾಷ್ಟ್ರೀಯ ಜನತಾದಳ(ಆರ್‌ಜೆಡಿ) ಸುಮಾರು 145 ಸ್ಥಾನಗಳಲ್ಲಿ ಸ್ಪರ್ಧಿಸುವ ಸಾಧ್ಯತೆ ಇದೆ ಮತ್ತು ವಿಕಾಸಶೀಲ ಇನ್ಸಾನ್ ಪಕ್ಷಕ್ಕೂ ಅವಕಾಶ ಕಲ್ಪಿಸುವ ಸಾಧ್ಯತೆ ಇದೆ. ಕಾಂಗ್ರೆಸ್ ಪಕ್ಷ 70 ಸ್ಥಾನಗಳಿಗೆ ಸ್ಪರ್ಧಿಸುವ ಸಾಧ್ಯತೆಯಿದೆ. ಸಿಪಿಐ, ಸಿಪಿಐ (ಎಂ), ಮತ್ತು ಸಿಪಿಐ (ಎಂಎಲ್) ಸೇರಿದಂತೆ ಎಡ ಪಕ್ಷಗಳು ಸುಮಾರು 30 ಸ್ಥಾನಗಳನ್ನು ಪಡೆಯಲಿವೆ. ಬಿಹಾರದಲ್ಲಿ ವಾಲ್ಮೀಕಿ ನಗರ ಲೋಕಸಭಾ ಉಪ ಚುನಾವಣೆಯಲ್ಲಿ ಯಾರು ಸ್ಪರ್ಧಿಸಲಿದ್ದಾರೆ ಎಂಬ ಬಗ್ಗೆ ಮಾತುಕತೆ ನಡೆಯುತ್ತಿದ್ದು, ಆರ್‌ಜೆಡಿ ಮತ್ತು ಕಾಂಗ್ರೆಸ್ ಎರಡೂ ಪಕ್ಷಗಳು ಸ್ಪರ್ಧಿಸಲು ಬಯಸುತ್ತಿವೆ ಎಂದು ಮೂಲಗಳು ತಿಳಿಸಿವೆ.
ವಿಧಾನಸಭಾ ಚುನಾವಣೆಗೆ ಸ್ಥಾನಗಳನ್ನು ಅಂತಿಮಗೊಳಿಸುವ ಬಗ್ಗೆ ಎನ್‌ಡಿಎ ಹಿರಿಯ ನಾಯಕರು ಗುರುವಾರ ಪಾಟ್ನಾದಲ್ಲಿ ಸಭೆ ನಡೆಸಿದ್ದಾರೆ ಮತ್ತು ಅಕ್ಟೋಬರ್ 4ರಂದು ದೆಹಲಿಯಲ್ಲಿ ಸೀಟು ಹಂಚಿಕೆ ಸೂತ್ರವನ್ನು ಪ್ರಕಟಿಸುವ ಸಾಧ್ಯತೆಯಿದೆ.
71 ಸ್ಥಾನಗಳಿಗೆ ಈಗಾಗಲೇ ಮೊದಲ ಹಂತದ ಚುನಾವಣೆಗೆ ನಾಮಪತ್ರ ಸಲ್ಲಿಸುವ ಪ್ರಕ್ರಿಯೆ ಆರಂಭವಾಗಿದೆ. ಬಿಹಾರದಲ್ಲಿ ಒಟ್ಟು 243 ವಿಧಾನಸಭಾ ಸ್ಥಾನಗಳಿದ್ದು, 3 ಹಂತದಲ್ಲಿ ಚುನಾವಣೆ ನಡೆಯಲಿದೆ.