ಮುಂಬೈ:ಕಳೆದ ಕೆಲ ದಿನಗಳಿಂದ ಮಹಾರಾಷ್ಟ್ರದಲ್ಲಿ ಉಂಟಾಗಿರುವ ಸರ್ಕಾರ ರಚನೆ ಹೈಡ್ರಾಮ ಕೊನೆಗೊಳ್ಳುವ ಎಲ್ಲ ಲಕ್ಷಣ ಗೋಚರವಾಗುತ್ತಿದ್ದು, ಶಿವಸೇನೆ ಇದೀಗ ಎನ್ಸಿಪಿ+ಕಾಂಗ್ರೆಸ್ ಜತೆ ಮೈತ್ರಿ ಮಾಡಿಕೊಳ್ಳುವುದು ಕನ್ಫರ್ಮ್ ಆಗಿದೆ.
ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ನಿವಾಸದಲ್ಲಿ ನಡೆದ ಮಹತ್ವದ ಸಭೆಯಲ್ಲಿ ಸೀಟು ಹಂಚಿಕೆ ಸಹ ಮುಕ್ತಾಯಗೊಂಡಿದೆ ಎಂಬ ಮಾತು ಹೊರಬಿದ್ದಿದ್ದು, ಶಿವಸೇನೆ ಹಾಗೂ ಎನ್ಸಿಪಿಗೆ ಮುಖ್ಯಮಂತ್ರಿ ಕುರ್ಚಿ ಹಾಗೂ ಕಾಂಗ್ರೆಸ್ಗೆ ಡೆಪ್ಯುಟಿ ಸಿಎಂ ಹುದ್ದೆ ನೀಡುವುದು ಬಹುತೇಕ ಫೈನಲ್ ಎಂದು ಹೇಳಲಾಗುತ್ತಿದೆ.
ಸರ್ಕಾರ ರಚನೆಯಾಗುತ್ತಿದ್ದಂತೆ ಆರಂಭದ ಎರಡೂವರೆ ವರ್ಷ ಶಿವಸೇನೆ ಮುಖ್ಯಮಂತ್ರಿ ತದನಂತರ ಎನ್ಸಿಪಿ ಅಭ್ಯರ್ಥಿ ಮುಖ್ಯಮಂತ್ರಿಯಾಗಲಿದ್ದು, 44 ಕ್ಷೇತ್ರಗಳಲ್ಲಿ ಗೆಲುವು ದಾಖಲು ಮಾಡಿರುವ ಕಾಂಗ್ರೆಸ್ಗೆ ಐದು ವರ್ಷಗಳ ಕಾಲ ಉಪಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಡಲು ನಿರ್ಧರಿಸಲಾಗಿದೆ ಎನ್ನಲಾಗುತ್ತಿದೆ.
ಇದರ ಜತೆಗೆ 16:15:12 ಫಾರ್ಮುಲಾದೊಂದಿಗೆ ಸರ್ಕಾರ ರಚನೆ ಮಾಡಲು ನಿರ್ಧರಿಸಲಾಗಿದ್ದು, 16 ಕ್ಯಾಬಿನೆಟ್ ಮಂತ್ರಿಗಳು ಶಿವಸೇನೆಯಿಂದ, 15 ಸಚಿವರು ಎನ್ಸಿಪಿ ಹಾಗೂ 12 ಸಚಿವರು ಕಾಂಗ್ರೆಸ್ನಿಂದ ಪ್ರಮಾಣವಚನ ಸ್ವೀಕಾರ ಮಾಡಲಿದ್ದಾರೆ ಎನ್ನಲಾಗಿದ್ದು, ಸ್ಪೀಕರ್ ಸ್ಥಾನ ಕಾಂಗ್ರೆಸ್ಗೆ ನೀಡಲಾಗುತ್ತದೆ ಎಂದು ತಿಳಿದು ಬಂದಿದೆ.
ಇದೇ ವಿಷಯವಾಗಿ ಮಾತನಾಡಿರುವ ಮಾಜಿ ಮುಖ್ಯಮಂತ್ರಿ ಪೃಥ್ವಿರಾಜ್ ಚೌಹಾನ್, ಸರ್ಕಾರ ರಚನೆ ಕುರಿತು ಮಾತುಕತೆ ಮುಂದುವರಿದಿದ್ದು, ರಾಜ್ಯದಲ್ಲಿ ಸ್ಥಿರ ಸರ್ಕಾರ ನೀಡುವ ವಿಶ್ವಾಸವಿದೆ ಎಂದಿದ್ದಾರೆ.
ಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಅಹ್ಮದ್ ಪಟೇಲ್,ಜೈರಾಮ್ ರಮೇಶ್,ಮಲ್ಲಿಕಾರ್ಜುನ್ ಖರ್ಗೆ,ಪೃಥ್ವಿರಾಜ್ ಚೌಹಾನ್,ಕೆಸಿ ವೇಣುಗೋಪಾಲ್ ಭಾಗಿಯಾಗಿದ್ದರು. ಇದೇ ವೇಳೆ ಮಾತನಾಡಿರುವ ಮಾಜಿ ಮುಖ್ಯಮಂತ್ರಿ ಪೃಥ್ವಿರಾಜ್ ಚೌಹ್ಹಾಣ್, ಮೈತ್ರಿ ಏರ್ಪಡುವ ವಿಶ್ವಾಸವಿದ್ದು, ಮಹಾರಾಷ್ಟ್ರದಲ್ಲಿನ ರಾಜಕೀಯ ಅನಿಶ್ಚತತೆ ಕೊನೆಯಾಗಲಿದೆ ಎಂದಿದ್ದಾರೆ.