ಚೆನ್ನೈ:ಆದಾಯ ತೆರಿಗೆ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಗೀತ ಮಾಂತ್ರಿಕ ಎಂದೇ ಹೆಸರಾದ ಖ್ಯಾತ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ಗೆ ಚೆನ್ನೈ ಹೈಕೋರ್ಟ್ ನೋಟೀಸ್ ಜಾರಿ ಮಾಡಿದೆ. ಆದಾಯ ತೆರಿಗೆ ಆಯುಕ್ತರು ಸಲ್ಲಿಸಿದ್ದ ಮೇಲ್ಮನವಿ ಮೇರೆಗೆ ಎ.ಆರ್. ರೆಹಮಾನ್ಗೆ ಈ ನೋಟೀಸ್ ಜಾರಿ ಮಾಡಲಾಗಿದೆ.
2011-12 ರಲ್ಲಿ ಎ.ಆರ್. ರೆಹಮಾನ್ 15.98 ಕೋಟಿ ರೂಪಾಯಿ ಆದಾಯವನ್ನು ಘೋಷಿಸಿದ್ದರು. 2014 ರಲ್ಲಿ ತೆರಿಗೆ ಇಲಾಖೆ ಇದನ್ನು ಅಂಗೀಕರಿಸಿತ್ತು. ಆದರೆ ಇದರಲ್ಲಿ ಫೋಟಾನ್ ಕಥಾಸ್ ಪ್ರೊಡಕ್ಷನ್ನಿಂದ ಪಡೆದ 54 ಲಕ್ಷ ರೂಪಾಯಿ ಹಾಗೂ ಯುಕೆ ಮೂಲಕ ಲೆಬರಾ ಮೊಬೈಲ್ ಸಂಸ್ಥೆಯಿಂದ ಪಡೆದ 3.47 ಕೋಟಿ ರೂಪಾಯಿ ಬಗ್ಗೆ ವಿವರಗಳನ್ನು ಸಲ್ಲಿಸಲಾಗಿಲ್ಲ ಎಂದು ಆದಾಯ ತೆರಿಗೆ ಇಲಾಖೆ ರೆಹಮಾನ್ ಗಮನಕ್ಕೆ ತಂದಿತ್ತು. ನಂತರ ಎ.ಆರ್. ರೆಹಮಾನ್ ಮತ್ತೆ ಪರಿಷ್ಕೃತ ವಿವರಗಳನ್ನು ಆದಾಯ ತೆರಿಗೆ ಇಲಾಖೆಗೆ ನೀಡಿದ್ದರಿಂದ 2016 ರಲ್ಲಿ ಮತ್ತೆ ಇದನ್ನು ಅಂಗೀಕರಿಸಲಾಯ್ತು.