ಭೋಪಾಲ್: ಶಿವರಾಜ್ ಸಿಂಗ್ ಚೌಹಾಣ್ ನೇತೃತ್ವದ ಮಧ್ಯಪ್ರದೇಶದ ಸಚಿವ ಸಂಪುಟ ಇಂದು ವಿಸ್ತರಣೆಯಾಗಿದೆ. ಜ್ಯೋತಿರಾದಿತ್ಯ ಸಿಂಧಿಯಾರ ಆಪ್ತರೂ ಸೇರಿದಂತೆ ಒಟ್ಟು 28 ಸಚಿವರಿಂದು ಪ್ರಮಾಣ ವಚನ ಸ್ವೀಕರಿಸಿದರು.
ಇದು ಚೌಹಾಣ್ ಸರ್ಕಾರದ ಎರಡನೇ ಬಾರಿಯ ಸಚಿವ ಸಂಪುಟ ವಿಸ್ತರಣೆಯಾಗಿದ್ದು, ರಾಜ್ಯಪಾಲೆ ಆನಂದಿಬೆನ್ ಪಟೇಲ್ ಅವರು ರಾಜ ಭವನದಲ್ಲಿ ನೂತನ ಸಚಿವರಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು. 28 ಸಚಿವರ ಪೈಕಿ 20 ಜನ ಸಂಪುಟ ದರ್ಜೆ ಸಚಿವರಾಗಿ, 8 ಜನರು ರಾಜ್ಯ ಸಚಿವರಾಗಿದ್ದಾರೆ.
ಕಾಂಗ್ರೆಸ್ನ 22 ರೆಬೆಲ್ ಶಾಸಕರು ರಾಜೀನಾಮೆ ನೀಡಿದ ಬಳಿಕ ಕಮಲ್ ನಾಥ್ ಸರ್ಕಾರ ಅಧಿಕಾರದಿಂದ ಕೆಳಗಿಳಿದಿತ್ತು. ಬಳಿಕ ಮಾರ್ಚ್ 23 ರಂದು ಶಿವರಾಜ್ ಸಿಂಗ್ ಚೌಹಾಣ್ ಹಂಗಾಮಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಏಪ್ರಿಲ್ 21 ರಂದು ಮೊದಲ ಬಾರಿಯ ಕ್ಯಾಬಿನೆಟ್ ವಿಸ್ತರಣೆಯಲ್ಲಿ ಜ್ಯೋತಿರಾದಿತ್ಯ ಸಿಂಧಿಯಾರ ಆಪ್ತರೂ, ಮಾಜಿ ಕಾಂಗ್ರೆಸ್ ಶಾಸಕರಾದ ತುಳಸಿ ಸಿಲಾವತ್ ಮತ್ತು ಗೋವಿಂದ್ ಸಿಂಗ್ ರಜಪೂತ್ ಸೇರಿದಂತೆ ಐವರಿಗೆ ಸಚಿವ ಸ್ಥಾನ ನೀಡಲಾಗಿತ್ತು. ಚೌಹಾಣ್ ಸರ್ಕಾರದ ಸಚಿವರ ಸಂಖ್ಯೆ ಇದೀಗ 34ಕ್ಕೆ ಏರಿಕೆಯಾಗಿದೆ. ಆದರೆ ಸದನದ ಒಟ್ಟು ಬಲ 35 ಆಗಿದ್ದು, ಇನ್ನೊಂದು ಸ್ಥಾನ ಖಾಲಿಯಿದೆ.