ಭೋಪಾಲ್(ಮಧ್ಯ ಪ್ರದೇಶ): ರಾಜ್ಯದ ಈದ್ಗಾಹಿಲ್ಸ್, ಹೋಶಂಗಾಬಾದ್ ಮತ್ತು ಇಂದೋರ್ ನಗರಗಳ ಹೆಸರನ್ನು ಬದಲಾಯಿಸಲು ವಿಧಾನಸಭೆಯ ಹಂಗಾಮಿ ಸ್ಪೀಕರ್ ರಾಮೇಶ್ವರ್ ಶರ್ಮಾ ಸೂಚಿಸಿದ್ದಾರೆ.
ಮಧ್ಯಪ್ರದೇಶದಲ್ಲೂ ನಗರಗಳ ಮರು ನಾಮಕರಣ ಪರ್ವ ಹೋಶಂಗಾಬಾದ್ ನಗರದ ಹೆಸರನ್ನು 'ನರ್ಮದಾಪುರಂ' ಮತ್ತು ಭೋಪಾಲ್‌ನ ಈದ್ಗಾಹಿಲ್ಸ್ ಅನ್ನು 'ಗುರುನಾನಕ್ ತೆಕ್ರಿ' ಎಂದು ಬದಲಾಯಿಸಲು ಶರ್ಮಾ ಸಲಹೆ ನೀಡಿದ್ದಾರೆ. ರಾಜ್ಯ ಬಿಜೆಪಿ ಅಧ್ಯಕ್ಷ ವಿ ಡಿ ಶರ್ಮಾ ಕೂಡ ಸ್ಪೀಕರ್ ಅವರ ಸಲಹೆಯನ್ನು ಬೆಂಬಲಿಸುತ್ತಿದ್ದು, ಸಾರ್ವಜನಿಕರು ಸಮ್ಮತಿ ಸೂಚಿಸಿದರೆ ನಗರಗಳ ಹೆಸರನ್ನು ಬದಲಾಯಿಸಹುದು ಎಂದು ಅಭಿಪ್ರಾಯಪಟ್ಟಿದ್ದಾರೆ. ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ವಿ.ಡಿ. ಶರ್ಮಾ, ಅಷ್ಟಕ್ಕೂ ಹೋಶಂಗಾಬಾದ್ ಪ್ರದೇಶವನ್ನು ಈಗಾಗಲೇ ನರ್ಮದಾಪುರಂ ಎಂದು ಕರೆಯಲಾಗುತ್ತದೆ. ಹೀಗಾಗಿ ಸಾರ್ವಜನಿಕರು ಹೋಶಂಗಾಬಾದ್ ಬದಲಿಗೆ ನರ್ಮದಾಪುರಂ ಹೆಸರನ್ನು ಬಯಸಿದರೆ, ಅವರ ಆಸೆಯಂತೆ ನರ್ಮದಾಪುರಂ ಎಂದು ಬದಲಾಯಿಸಲಾಗುತ್ತೆ ಎಂದು ತಿಳಿಸಿದ್ರು.
ಮಧ್ಯಪ್ರದೇಶದಲ್ಲಿ ನಗರಗಳು ಮತ್ತು ಸ್ಥಳಗಳ ಹೆಸರನ್ನು ಬದಲಾಯಿಸುವ ರಾಜಕೀಯ ಹೊಸತಲ್ಲ. ಭೋಪಾಲ್ ಹೆಸರನ್ನು ಭೋಜ್‌ಪಾಲ್ ಮತ್ತು ಇಂದೋರ್ ಅನ್ನು ಇಂದೂರ್ ಎಂದು ಬದಲಾಯಿಸುವಂತೆ ಬಿಜೆಪಿ ಈಗಾಗಲೇ ಒತ್ತಾಯಿಸಿದೆ. ಆದರೆ ಇದಕ್ಕೆ ವಿರೋಧ ವ್ಯಕ್ತಪಡಿಸಿರುವ ಕಾಂಗ್ರೆಸ್ ಮುಖಂಡ ಭೂಷಣ್ನಾಥ್, "ಹೆಸರು ಬದಲಾವಣೆಯಿಂದ ಅಭಿವೃದ್ಧಿ ಸಾಧ್ಯವಿಲ್ಲ''. ನಗರಗಳು ಮತ್ತು ಸ್ಥಳಗಳ ಹೆಸರನ್ನು ಬದಲಾಯಿಸುವ ಮೂಲಕ ವಾತಾವರಣವನ್ನು ಹಾಳು ಮಾಡಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ.
ನಗರಗಳು ಅಥವಾ ಸ್ಥಳಗಳ ಹೆಸರನ್ನು ಮರುಹೆಸರಿಸುವ ಪ್ರಕ್ರಿಯೆ ಹೇಗೆ..?
ಯಾವುದೇ ಜಿಲ್ಲೆ ಮತ್ತು ಸ್ಥಳದ ಹೆಸರನ್ನು ಬದಲಾಯಿಸಲು, ಸ್ಥಳೀಯ ಸಂಸ್ಥೆ ಮೊದಲು ಪರಿಷತ್ತಿನಲ್ಲಿ ನಿರ್ಣಯವನ್ನು ಅಂಗೀಕರಿಸುತ್ತದೆ. ಇದರ ನಂತರ, ಪ್ರಸ್ತಾವನೆಯನ್ನು ಸರ್ಕಾರಕ್ಕೆ ಕಳುಹಿಸಲಾಗುತ್ತದೆ. ಸಂಪುಟದ ಅನುಮೋದನೆಯ ನಂತರ ಅದನ್ನು ರಾಜ್ಯಪಾಲರಿಗೆ ಕಳುಹಿಸಲಾಗುತ್ತದೆ. ರಾಜ್ಯಪಾಲರು ಹೆಸರು ಬದಲಾವಣೆಗಾಗಿ ಗೃಹ ಸಚಿವಾಲಯಕ್ಕೆ ಮಾಹಿತಿ ಕಳುಹಿಸುತ್ತಾರೆ. ಗೃಹ ಸಚಿವಾಲಯದ ಅನುಮೋದನೆಯ ನಂತರ, ಸರ್ಕಾರವು ತನ್ನ ಅಧಿಸೂಚನೆಯನ್ನು ಹೊರಡಿಸುತ್ತದೆ. ಇದಾದ ಬಳಿಕ ಆ ನಗರಗಳ ಜಿಲ್ಲಾಧಿಕಾರಿಗಳು ಸರ್ಕಾರಿ ದಾಖಲೆಗಳು ಮತ್ತು ಇತರ ಸ್ಥಳಗಳಲ್ಲಿ ಹೆಸರನ್ನು ಬದಲಾಯಿಸುತ್ತಾರೆ.